ನಾಸಿಕ್ , ಏ 18 (DaijiworldNews/MS): ದೇಶದ ಹಲವು ಭಾಗಗಳಲ್ಲಿ ಧ್ವನಿವರ್ಧಕಗಳವಿಚಾರವಾಗಿ ಅಜಾನ್-ಹನುಮಾನ್ ಚಾಲೀಸಾ ವಿವಾದದ ನಡುವೆ ಆಜಾನ್ ನಡೆಯುವ ಮೊದಲಿನ 15 ನಿಮಿಷ ಮತ್ತು ನಂತರದ 15 ನಿಮಿಷ ಯಾವುದೇ ರೀತಿಯ ಹನುಮಾನ್ ಚಾಲೀಸ್ ಅಥವಾ ಭಜನೆ ಮಾಡುವಂತಿಲ್ಲ ಎಂದು ಮಹಾರಾಷ್ಟ್ರದ ನಾಸಿಕ್ ಆಡಳಿತವು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ.
ಮಸೀದಿಗಳ ಧ್ವನಿವರ್ಧಕ ವಿಚಾರ ವಿವಾದ ಮತ್ತು ಸಂಘರ್ಷಕ್ಕೆ ತಿರುಗುವ ಶಂಕೆ ಹಿನ್ನಲೆಯಲ್ಲಿ ನಾಸಿಕ್ ಆಡಳಿತ ಈ ನಿರ್ಧಾರ ತೆಗೆದುಕೊಂಡಿದ್ದು, ಆದೇಶದ ಪ್ರಕಾರ, ಆಜಾನ್ ಮೊದಲು ಮತ್ತು ನಂತರ 15 ನಿಮಿಷಗಳ ಒಳಗೆ ಧ್ವನಿವರ್ಧಕದಲ್ಲಿ ಹನುಮಾನ್ ಚಾಲೀಸಾ ಅಥವಾ ಭಜನೆ ಹೆಚ್ಚಿಸಲು ಅನುಮತಿ ತೆಗೆದುಕೊಳ್ಳಬೇಕಾಗುತ್ತದೆ. ಯಾವುದೇ ಮಸೀದಿಯ 100 ಮೀಟರ್ ವ್ಯಾಪ್ತಿಯೊಳಗೆ ಇದನ್ನು ಅನುಮತಿಸಲಾಗುವುದಿಲ್ಲ ಎಂದು ಹೇಳಲಾಗಿದೆ. ಅಲ್ಲದೆ ಇದು ಕಾನೂನು ಸುವ್ಯವಸ್ಥೆ ಕಾಪಾಡುವುದು ಈ ಆದೇಶದ ಉದ್ದೇಶವಾಗಿದೆ ಎಂದು ಹೇಳಿದೆ.
ಈ ಕುರಿತು ಮಾತನಾಡಿದ ನಾಸಿಕ್ ಸಿಪಿ ದೀಪಕ್ ಪಾಂಡೆ ಅವರು, "ಮೇ 3 ರೊಳಗೆ ಎಲ್ಲಾ ಧಾರ್ಮಿಕ ಸ್ಥಳಗಳಿಗೆ ಧ್ವನಿವರ್ಧಕಗಳ ಬಳಕೆಗೆ ಅನುಮತಿ ಪಡೆಯುವಂತೆ ಸೂಚಿಸಲಾಗಿದೆ. ಮೇ 3 ರ ನಂತರ ಯಾರಾದರೂ ಆದೇಶವನ್ನು ಉಲ್ಲಂಘಿಸುವುದು ಕಂಡುಬಂದರೆ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು" ಎಂದು ಹೇಳಿದ್ದಾರೆ.