ಬೆಂಗಳೂರು, ಏ 18 (DaijiworldNews/HR): ಪಾಪ.. ಕಾಂಗ್ರೆಸ್!! ಸುಳ್ಳುರಾಮಯ್ಯನ ಸುಳ್ಳುಗಳ ಸುಪ್ಪತ್ತಿಗೆಯ ಮೇಲೆ ಮೈಮರೆತು ತೇಲುತ್ತಿದೆ. ಮುಳುಗುವೆ ಎನ್ನುವ ಅರಿವೂ ಆ ಪಕ್ಷಕ್ಕಿಲ್ಲ. ಮುಳುಗುವ ಹಡಗಿನ ಕ್ಯಾಪ್ಟನ್ʼಗೆ ಬಿಜೆಪಿ ಬಾಲಂಗೋಚಿ ʼಸಿದ್ದಹಸ್ತನʼ ಅಡ್ಜೆಸ್ಟ್ʼಮೆಂಟ್ ರಾಜಕಾರಣ ಮತ್ತು ಹಣಕ್ಕೆ ಮಾರಿಕೊಂಡ ಆ ಸುಪಾರಿ ಆಟಗಾರ ತನ್ನ ಕೈಕಚ್ಚುತ್ತಿದ್ದಾನೆ ಎಂಬ ಅರಿವೇ ಇಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ವಿರುದ್ಧ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ಹಾಸನದಲ್ಲಿ ವೃಥಾ ಹರಿಬಿಟ್ಟ ʼಸತ್ಯಭಕ್ಷʼ ನಾಯಕನ ಆಚಾರಹೀನ ಅರಿವುಗೆಟ್ಟ ನಾಲಗೆ ಮತ್ತೆ ಹುಚ್ಚುಕುಣಿತ ಮಾಡುತ್ತಿದೆ. ನಾನು ಕೇಳಿದ ಪ್ರಶ್ನೆಗಳಿಗೆ ಉತ್ತರವೇ ಇಲ್ಲ, ಮತ್ತೆಮತ್ತೆ ಕೆಣಕುವ ದುಸ್ಸಾಹಸ ಬೇರೆ. ಆಪರೇಷನ್ ಕಮಲ ಬಿಜೆಪಿ ಪಾಪದ ಕೂಸು. ಆ ಕೂಸಿಗೆ ಹಾಲೆರೆದವರು ಯಾರಯ್ಯ ಸುಳ್ಳುರಾಮಯ್ಯ? ಇಂಥ ಅನೈತಿಕ ಕೂಸಿಗೆ ಹಾಲೆರೆದು ಬೆಳೆಸಿ, ದೊಡ್ಡದು ಮಾಡಿದ ನೀವು, ಜೆಡಿಎಸ್ ಪಕ್ಷ ಬಿಜೆಪಿ ಬೀ ಟಿಂ ಎಂದು ಹಾದಿಬೀದಿಯಲ್ಲಿ ಜಾಗಟೆ ಹೊಡೆಯುತ್ತಿದ್ದೀರಲ್ಲ? ಇದ್ಯಾವ ಸೀಮೆ ರಾಜಕೀಯ? ಎಂದು ಪ್ರಶ್ನಿಸಿದ್ದಾರೆ.
ಬಹಿರಂಗದಲ್ಲಿ ಮಾತ್ರ ಬಿಜೆಪಿ ಕೋಮುವಾದಿ! ಅಂತರಂಗದಲ್ಲಿ ಅದಕ್ಕೆ ನೀವು ಅಡ್ಜಸ್ಟ್ʼಮೆಂಟ್ʼವಾದಿ!! ರಾಜಕೀಯ ಊಸರವಳ್ಳಿ, ಸಿದ್ದಕಲಾ ನಿಪುಣನೇ. ನಿಮ್ಮ ರಾಜಕೀಯ ಲೀಲೆಗಳು ಒಂದಾ ಎರಡಾ? 2008-2009; ಶಾಸಕರ ಖರೀದಿ ಚಾಪ್ಟರ್ 1. ಆಗ 8 ವಿಧಾನಸಭೆ ಕ್ಷೇತ್ರಗಳಿಗೆ ಉಪ ಚುನಾವಣೆ. ದಲಿತ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಪ್ರತಿಪಕ್ಷ ನಾಯಕ ಸ್ಥಾನದಿಂದ ಕಿತ್ತೆಸೆಯಲು ಬಿಜೆಪಿ ಜತೆ ಡೀಲ್ ಕುದುರಿಸಿಕೊಂಡು ಡಿಂಗ್ ಡಾಂಗ್ ಹಾಡಿದ್ದು ಯಾರಯ್ಯ? ಹೆಸರಿನಲ್ಲಿ ʼರಾಮʼ! ಉಂಡ ಮನೆಗೆ ಪಂಗನಾಮ!! ಸ್ವಯಂ ಘೋಷಿತ ಸತ್ಯಹರಿಶ್ಚಂದ್ರ ಎಂದು ಟೀಕಿಸಿದ್ದಾರೆ.
ಆಪರೇಷನ್ ಕಮಲಕ್ಕೆ ಕೈ ಜೋಡಿಸಿದ್ದಕ್ಕೆ ದಕ್ಷಿಣೆಯಾಗಿ ಮುಟ್ಟಿದ ಹಣವೆಷ್ಟು? ಕೋಟಿಗಳ ಗಂಟು ತರಲು ಯಾರನ್ನು ಕಳಿಸಿದ್ದಿರಿ? ಆ ಹಣ ಏನಾಯಿತು? ಎಲ್ಲಿಗೆ ಹೋಯಿತು? ಚುನಾವಣೆಗೆ ಖರ್ಚು ಮಾಡಿದಿರಾ, ಇಲ್ಲಾ.. ಜೇಬಿಗಿಳಿಸಿ ಜಲ್ಸಾ ಮಾಡಿದಿರಾ? ಅದು ರಾಮನ ಲೆಕ್ಕದಲ್ಲಿದಿಯಾ? ಅಥವಾ..ಕೃಷ್ಣನ ಲೆಕ್ಕದಲ್ಲಿಯಾ? ʼಆಪರೇಷನ್ ಕಮಲ ಹಣದ ಕಥಾಪ್ರಸಂಗʼ ರೋಚಕ ʼಸಿದ್ದಸಿನಿಮಾʼ ಎಂಬ ಬಗ್ಗೆ ಅನುಮಾನ ಇಲ್ಲ. ಅದಕ್ಕೆ ಕಥೆ, ಚಿತ್ರಕಥೆ, ನಿರ್ದೇಶನ, ಹಿಮ್ಮೇಳ-ಮುಮ್ಮೇಳ ಎಲ್ಲವೂ ನಿಮ್ಮದೆ? ಧೈರ್ಯವಿ ದ್ದರೆ ಅದರ ಬಗ್ಗೆ ಮಾತನಾಡಿ. ಕನ್ನಡಿಗರೆಲ್ಲರಿಗೂ ನಿಮ್ಮ ಕಪಟತನದ ಪರಿಚಯವಾಗಲಿ.
ಇನ್ನು ಆಪರೇಷನ್ ಕಮಲದ ಬಾಬ್ತಿನ ಹಣ ಸ್ವೀಕರಿಸಿ ನಿಮಗೆ ತಂದುಕೊಟ್ಟ ನಿಮ್ಮ ಆ ಹಳೆಯ ಸ್ನೇಹಿತರೇ ಸ್ವತಃ ನನ್ನ ಬಳಿ ಬಿಚ್ಚಿಟ್ಟ ಕಟುಸತ್ಯವಿದು! ಎಷ್ಟೇ ಆದರೂ, ಸತ್ಯ ನಿಮಗೆ ಅಪಥ್ಯ ಅಲ್ಲವೇ? ಕಳ್ಳಬೆಕ್ಕು ಕದ್ದು ಹಾಲು ಕುಡಿದರೆ ಗೊತ್ತಾಗುವುದಿಲ್ಲ ಎಂಬ ಹುಂಬುತನವೇ? ಅಬ್ಬಬ್ಬಾ.. ನಿಮಗೆ ನೀವೇ ಸಾಟಿ!! ಎಂದು ವಾಗ್ದಾಳಿ ನಡೆಸಿದ್ದಾರೆ.