ಬೆಂಗಳೂರು, ಏ 18 (DaijiworldNews/HR): ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೇ ಇನ್ನು ಮುಂದೆ ವಿವಾಹ ನೋಂದಣಿ ಮಾಡಿಸಿಕೊಳ್ಳಬೇಕು ಎಂದು ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಈ ಕುರಿತ ಆದೇಶ ಪ್ರಕಟವಾಗಿದ್ದು, ಕರ್ನಾಟಕ ಸರ್ಕಾರ ವಿವಾಹ ನೋಂದಣಿ ಅಧಿಕಾರವನ್ನು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ)ಗಳಿಗೆ ವಹಿಸಿ ಆದೇಶ ಹೊರಡಿಸಿದೆ.
ಇನ್ನು ಈ ಹಿಂದೆ ತಾಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿರುವ ಉಪ ನೋಂದಣಾಧಿಕಾರಿ (ಸಬ್ ರಿಜಿಸ್ಟರ್) ಕಚೇರಿಯಲ್ಲಿ ಮಾತ್ರ ವಿವಾಹ ನೋಂದಣಿ ಮಾಡಿಸಬೇಕಿತ್ತು. ಇದೀಗ ವಿವಾಹ ನೋಂದಣಿಗಾಗಿ ತಾಲೂಕು ಮತ್ತು ಜಿಲ್ಲಾ ಕೇಂದ್ರಕ್ಕೆ ಅಲೆದಾಟ ನಡೆಸುವುದು ತಪ್ಪಿದೆ.
ಕೆಲವು ದಿನಗಳ ಹಿಂದೆ ಸರ್ಕಾರ ಜನನ-ಮರಣ ನೋಂದಣಿ ಮಾಡುವ ಅಧಿಕಾರವನ್ನು ಪಿಡಿಒಗಳಿಗೆ ನೀಡಿದ್ದು, ಈಗ ವಿವಾಹ ನೋಂದಣಿ ಅಧಿಕಾರವನ್ನು ಅವರಿಗೆ ನೀಡಲಾಗಿದೆ.