ನವದೆಹಲಿ, ಏ 17 (DaijiworldNews/DB): ತಮ್ಮ ಶಿಕ್ಷಣಕ್ಕೆ ಭಾರತೀಯ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಕಲ್ಪಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿ ಯುದ್ಧ ಪೀಡಿತ ಉಕ್ರೇನ್ನಿಂದ ಹಿಂತಿರುಗಿದ ವಿದ್ಯಾರ್ಥಿಗಳು ಜಂತರ್ ಮಂತರ್ನಲ್ಲಿ ಭಾನುವಾರ ಪೋಷಕರೊಂದಿಗೆ ಧರಣಿ ನಡೆಸಿದರು.
ಕೇಂದ್ರ ಸರ್ಕಾರವು ಉಕ್ರೇನ್ನಿಂದ ಮಕ್ಕಳನ್ನು ಕರೆ ತಂದಿರುವುದಕ್ಕೆ ಧನ್ಯವಾದ. ಆದರೆ, ಪ್ರಸ್ತುತ ಅವರ ಶಿಕ್ಷಣದ ಕುರಿತು ಗೊಂದಲ ಏರ್ಪಟ್ಟಿದೆ. ಒಂದೆಡೆ ಶಿಕ್ಷಣ ಪೂರೈಸಲು ಉಕ್ರೇನ್ಗೆ ತೆರಳುವಂತಿಲ್ಲ. ಇನ್ನೊಂದೆಡೆ ಭಾರತದಲ್ಲಿಯೂ ಶಿಕ್ಷಣ ಮುಂದುವರಿಸುವ ಸಂಬಂಧ ಸರ್ಕಾರದಿಂದ ಇಲ್ಲಿವರೆಗೆ ಯಾವುದೇ ಮಾಹಿತಿಗಳು ಬಂದಿಲ್ಲ. ಇದರಿಂದ ಮಕ್ಕಳ ಶಿಕ್ಷಣ ಗೊಂದಲದ ಗೂಡಾಗಿದೆ. ಸರ್ಕಾರ ದಯವಿಟ್ಟು ಉಕ್ರೇನ್ನಿಂದ ವಾಪಸಾದ ವಿದ್ಯಾರ್ಥಿಗಳ ಶಿಕ್ಷಣವನ್ನು ಭಾರತದ ಶಿಕ್ಷಣ ಸಂಸ್ಥೆಗಳಲ್ಲೇ ಪೂರೈಸಲು ಅನುವು ಮಾಡಿಕೊಡಬೇಕು ಎಂದು ಪೋಷಕರು ಒತ್ತಾಯಿಸಿದರು.
ಸರ್ಕಾರ ನಮ್ಮ ಶಿಕ್ಷಣದ ಕಡೆ ಗಮನ ಹರಿಸಬೇಕು. ವೈದ್ಯಕೀಯ ಶಿಕ್ಷಣ ಮುಂದುವರಿಸಲು ಅವಕಾಶ ನೀಡಬೇಕು ಮುಂತಾದ ಫಲಕಗಳನ್ನು ಹಿಡಿದು ವಿದ್ಯಾರ್ಥಿಗಳು ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಿದರು.
ಪೋಷಕರು ಮತ್ತು ವಿದ್ಯಾರ್ಥಿಗಳು ಸೇರಿ 50ಕ್ಕೂ ಹೆಚ್ಚು ಮಂದಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.