ನವದೆಹಲಿ, ಏ 17 (DaijiworldNews/DB): ದೆಹಲಿಯ ಉಪಹಾರ್ ಚಿತ್ರಮಂದಿರದಲ್ಲಿ ಭಾನುವಾರ ಅಗ್ನಿ ಅವಘಡ ಸಂಭವಿಸಿ ಆಸನ, ಪೀಠೋಪಕರಣಗಳಿಗೆ ಬೆಂಕಿ ಹೊತ್ತಿಕೊಂಡಿದೆ. ಇಲ್ಲಿ ಬೆಂಕಿ ಅವಘಡ ಸಂಭವಿಸುತ್ತಿರುವುದು ಇದು ಎರಡನೇ ಬಾರಿಯಾಗಿದೆ.
ದೆಹಲಿಯ ಗ್ರೀನ್ ಪಾರ್ಕ್ ಪ್ರದೇಶದಲ್ಲಿರುವ ಈ ಚಿತ್ರ ಮಂದಿರದಲ್ಲಿ ಮುಂಜಾನೆ 4:46ಕ್ಕೆ ಬೆಂಕಿ ಕಾಣಿಸಿಕೊಂಡಿದ್ದು, 7.30ರ ಸುಮಾರಿಗೆ ಬೆಂಕಿ ನಂದಿಸಲಾಯಿತು. ಒಂಬತ್ತು ಅಗ್ನಿಶಾಮಕ ವಾಹನಗಳು ಸ್ಥಳಕ್ಕಾಗಮಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದವು. ಅವಘಡದಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ. ಕೆಲವು ಆಸನಗಳು, ಪೀಠೋಪಕರಣಗಳು ಮತ್ತು ಚಿತ್ರಮಂದಿರದ ಪಕ್ಕದಲ್ಲಿದ್ದ ತ್ಯಾಜ್ಯಕ್ಕೆ ಬೆಂಕಿ ಹೊತ್ತಿಕೊಂಡಿದೆ. ಬಾಲ್ಕನಿ, ಮಹಡಿಗೂ ಬೆಂಕಿ ತಗುಲಿದೆ ಎಂದು ದೆಹಲಿ ಅಗ್ನಿಶಾಮಕ ಸೇವಾ ನಿರ್ದೇಶಕ ಅತುಲ್ ಗಾರ್ಗ್ ತಿಳಿಸಿದ್ದಾರೆ.
1997ರಲ್ಲಿ ಇಲ್ಲಿ ಚಿತ್ರ ಪ್ರದರ್ಶನ ನಡೆಯುತ್ತಿದ್ದ ವೇಳೆ ಅಗ್ನಿ ದುರಂತ ಸಂಭವಿಸಿ 59 ಜನರ ಸಾವಿಗೆ ಕಾರಣವಾಗಿ ಬಳಿಕ ಈ ಚಿತ್ರ ಮಂದಿರ ಮುಚ್ಚಲ್ಪಟ್ಟಿತ್ತು. ಈ ಅವಘಡದಲ್ಲಿ100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.