ಬೆಂಗಳೂರು, ಏ 17 (DaijiworldNews/HR): ಸಚಿವ ಆರಗ ಜ್ಞಾನೇಂದ್ರ ಅವರು ಒಳ್ಳೆಯ ಮನುಷ್ಯ. ಆದರೆ ಉತ್ತಮ ಗೃಹ ಸಚಿವರಲ್ಲ. ಹಾಗಾಗಿ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಆಗ್ರಹಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಬಿಜೆಪಿಯವರಿಗೆ ಸೇರಿದ ವ್ಯಕ್ತಿಯ ಶಿಕ್ಷಣ ಸಂಸ್ಥೆಯಲ್ಲಿ ಪಿಎಸ್ ಐ ಪರೀಕ್ಷೆಯಲ್ಲಿ ಸುಮಾರು 2,10 ಕೋಟಿ ರೂ ಭ್ರಷ್ಟಾಚಾರ ನಡೆದಿದ್ದು, ನಿಷ್ಪಕ್ಷಪಾತ ತನಿಖೆ ನಡೆಯಬೇಕಾದರೆ ಆರಗ ಜ್ಞಾನೇಂದ್ರ ರಾಜೀನಾಮೆ ನೀಡಬೇಕು ಎಂದರು.
ಇನ್ನು ಕರ್ನಾಟಕದಲ್ಲಿ 40 ಪರ್ಸೆಂಟೇಜ್ ಸರ್ಕಾರವಿದ್ದು, ಎಲ್ಲ ಇಲಾಖೆಗಳಲ್ಲೂ ಭ್ರಷ್ಟಾಚಾರ ನಡೆಯುತ್ತಿದೆ. ಎಲ್ಲಾ ಇಲಾಖೆಗಳ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆದರೆ ಇಡೀ ಸಂಪುಟ ಖಾಲಿಯಾಗಲಿದೆ ಎಂದು ಹೇಳಿದ್ದಾರೆ.