ಬೆಂಗಳೂರು, ಏ 17 (DaijiworldNews/DB): ಕೆಲವರು ಕಾನೂನಿಗಿಂತ ದೊಡ್ಡವರು ತಾವು ಎಂದು ತಿಳಿದುಕೊಂಡಿದ್ದಾರೆ. ಕಾನೂನು ಕೈಗೆತ್ತಿಕೊಳ್ಳುವ ಮಂದಿ ಯಾರೇ ಆಗಿದ್ದರೂ ಅವರ ವಿರುದ್ಧ ನಿರ್ದಾಕ್ಷೀಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡಿದ ಅವರು, ಸಂಘಟನೆಗಳು, ಧರ್ಮ ಯಾವುದೇ ಇರಲಿ. ಕಾನೂನು ಎಲ್ಲರಿಗೂ ಸಮಾನವಾದುದು. ಕಾನೂನು ಮೀರಿ ನಡೆದುಕೊಂಡರೆ ಅಂತಹವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲಾಗುವುದು. ಸಹನೆ ಸರ್ಕಾರದ ದೌರ್ಬಲ್ಯ ಎಂದು ತಿಳಿದುಕೊಳ್ಳದಿರಿ. ಯಾರಿಗೆ ಯಾವ ಸಂದರ್ಭದಲ್ಲಿ ಏನು ಕ್ರಮ ಜರಗಿಸಬೇಕು ಎಂಬುದು ಸರ್ಕಾರಕ್ಕೆ ಗೊತ್ತಿದೆ ಎಂದರು.
ಸರ್ಕಾರದೊಂದಿಗೆ ಹುಡುಗಾಟಿಕೆ ಬೇಡ. ಈಗಾಗಲೇ ಪೊಲೀಸರು ಘಟನೆ ಸಂಬಂಧ ಹಲವರನ್ನು ಬಂಧಿಸಿದ್ದಾರೆ. ಘಟನೆ ಹಿಂದಿರುವ ಶಕ್ತಿಗಳ ಮಾಹಿತಿ ಕಲೆ ಹಾಕಲಾಗುತ್ತಿದೆ. ಕೆಲವು ಸಂಘಟನೆ ಮತ್ತು ಅನುಮಾನಾಸ್ಪದ ವ್ಯಕ್ತಿಗಳ ಮೇಲೆ ನಿಗಾ ಇಡಲು ಈಗಾಗಲೇ ಪೊಲೀಸರಿಗೆ ಸೂಚನೆ ನೀಡಲಾಗಿದೆ. ತಪ್ಪಿತಸ್ಥರ ವಿರುದ್ದ ಕ್ರಮ ಬಿಗಿಯಾಗಿರಲಿದೆ ಎಂದವರು ತಿಳಿಸಿದರು.