ಬೆಂಗಳೂರು, ಏ 17 (DaijiworldNews/DB): ಜೆಡಿಎಸ್ಗೆ ಅಧಿಕೃತವಾಗಿ ಪಾದಾರ್ಪಣೆ ಮಾಡಿದ ಸಿ.ಎಂ. ಇಬ್ರಾಹಿಂ ಭಾನುವಾರ ಜೆಡಿಎಸ್ ನೂತನ ರಾಜ್ಯಾಧ್ಯಕ್ಷರಾಗಿ ಪದಗ್ರಹಣ ಸ್ವೀಕರಿಸಿದ್ದಾರೆ.
ಜೆಡಿಎಸ್ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಅವರು ಜೆಡಿಎಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡರು. ಬಳಿಕ ಹಾಲಿ ಅಧ್ಯಕ್ಷ ಎಚ್. ಕೆ. ಕುಮಾರಸ್ವಾಮಿಯವರಿಂದ ಪಕ್ಷದ ಧ್ವಜವನ್ನು ಸ್ವೀಕರಿಸಿ ರಾಜ್ಯಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ಎಚ್.ಕೆ ಕುಮಾರಸ್ವಾಮಿ ಅವರು ಜೆಡಿಎಸ್ ಸಂಸದೀಯ ಮಂಡಳಿ ಅಧ್ಯಕ್ಷರಾಗಿ ಇದೇ ವೇಳೆ ಅಧಿಕಾರ ವಹಿಸಿಕೊಂಡರು.
ಈ ವೇಳೆ ಮಾತನಾಡಿದ ಎಚ್.ಕೆ ಕುಮಾರಸ್ವಾಮಿ, ಪಕ್ಷ ನನಗೆ ಎಲ್ಲವನ್ನೂ ಕೊಟ್ಟಿದೆ. ನನ್ನನ್ನು ಗುರುತಿಸಿ, ಬೆಳೆಸಿದ ಪಕ್ಷಕ್ಕೆ ಎಂದೆಂದೂ ಚಿರರುಣಿಯಾಗಿರುತ್ತೇನೆ. ಅಧ್ಯಕ್ಷ ಸ್ಥಾನದಿಂದ ಖುಷಿಯಿಂದಲೇ ನಿರ್ಗಮಿಸಿ ಹೊಸ ಜವಾಬ್ದಾರಿಯನ್ನು ಪಾರದರ್ಶಕವಾಗಿ ನಿಭಾಯಿಸಲು ಮುಂದಾಗಿದ್ದೇನೆ ಎಂದರು.
ಪಕ್ಷದ ಎಲ್ಲಾ ಚಟುವಟಿಕೆಗಳಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಸಮಭಾಗಿಯಾಗಬೇಕು. ಅಧಿಕಾರ ಶಾಶ್ವತವಲ್ಲ. ಆದರೆ ಪಕ್ಷ ನಮ್ಮದು ಎಂಬ ಯೋಚನೆ ಸದಾ ನಮ್ಮಲ್ಲಿರಬೇಕು. ಅಗ್ಗದ ಪ್ರಚಾರಗಳನ್ನು ಲೆಕ್ಕಿಸದೆ ಪಕ್ಷ ಸಂಘಟನೆಯತ್ತ ದಾಪುಗಾಲಿಡೋಣ ಎಂದವರು ಹೇಳಿದರು.