ಹೊಸಪೇಟೆ, ಏ 17 (DaijiworldNews/DB): ರಾಜ್ಯದ ಕಾಂಗ್ರೆಸ್ ನಾಯಕರಲ್ಲಿ ಮುಖ್ಯಮಂತ್ರಿ ಹುದ್ದೆಗೆ ಈಗಿಂದಲೇ ಪೈಪೋಟಿ ಶುರುವಾಗಿದೆ. ಆ ಪಕ್ಷದ ಸ್ಥಿತಿ ಕೂಸು ಹುಟ್ಟುವ ಮುನ್ನ ಕುಲಾವಿ ಎಂಬಂತೆ ಆಗಿದೆ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಲೇವಡಿ ಮಾಡಿದ್ದಾರೆ.
ಹೊಸಪೇಟೆಯಲ್ಲಿ ಬಿಜೆಪಿ ಕಾರ್ಯಕಾರಿಣಿಯಲ್ಲಿ ಮಾತನಾಡಿದ ಅವರು, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಸೋಲು ಖಚಿತ. ಆದಾಗ್ಯೂ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವೆ ಮುಖ್ಯಮಂತ್ರಿ ಹುದ್ದೆಗೆ ಪೈಪೋಟಿ ಪ್ರಾರಂಭವಾಗಿದೆ ಎಂದರು.
ಕಾಂಗ್ರೆಸ್ ಜನವಿಶ್ವಾಸ ಕಳೆದುಕೊಂಡ ಪಕ್ಷ. ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರದ ಸಾಧನೆಗಳನ್ನು ಪರಿಗಣಿಸಿ ಪಂಚರಾಜ್ಯ ಚುನಾವಣೆಯಲ್ಲಿ ನಾಲ್ಕು ರಾಜ್ಯಗಳ ಮತದಾರರು ಬಿಜೆಪಿಯನ್ನು ಅಧಿಕಾರಕ್ಕೆ ತಂದಿದ್ದಾರೆ. ಮೋದಿ ಮತ್ತು ಬೊಮ್ಮಾಯಿಯವರ ಜನಪರ ಯೋಜನೆಗಳು ಕರ್ನಾಟಕದಲ್ಲಿಯೂ ಬಿಜೆಪಿಗೆ ಜನ ಒಲಿಯುವಂತೆ ಮಾಡಲಿದೆ. ಕಾಮನ್ಮ್ಯಾನ್ ಮತ್ತು ಸಿಂಪಲ್ಮ್ಯಾನ್ ಬೊಮ್ಮಾಯಿಯವರ ಬಡವರ ಪರ ಯೋಜನೆಗಳು ಜನವಿಶ್ವಾಸ ಗಳಿಸಿವೆ ಎಂದವರು ತಿಳಿಸಿದರು.
ಸಂತೋಷ್ ಪಾಟೀಲ್ ಪ್ರಕರಣಕ್ಕೆ ಸಂಬಂಧಿಸಿ ಭಾರೀ ಷಡ್ಯಂತ್ರ ನಡೆದಿದೆ. ಇದರಲ್ಲಿ ಈಶ್ವರಪ್ಪರನ್ನು ಸಿಲುಕಿಸಲಾಗಿದೆ ಎಂದ ಅವರು, ಸಚಿವ ಈಶ್ವರಪ್ಪ ಈಗಾಗಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆದರೆ ಅವರು ನಮ್ಮ ಪಕ್ಷದ ಹಿರಿಯರು. ಅವರು ಶೀಘ್ರ ಆರೋಪ ಮುಕ್ತರಾಗಿ ಹೊರಬರಲಿದ್ದಾರೆ. ಕೆ.ಎಸ್.ಈಶ್ವರಪ್ಪ ಪರವಾಗಿ ಬಿಜೆಪಿ ಪಕ್ಷ ನಿಲ್ಲಲಿದೆ ಎಂದರು.