ಚಂಡೀಗಢ, ಏ 16 (DaijiworldNews/DB): ಮದ್ಯಪಾನ ಮಾಡಿ ಗುರುದ್ವಾರ ಪ್ರವೇಶಿಸಿದ್ದಾರೆ ಎಂದು ಆರೋಪಿಸಿ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ವಿರುದ್ಧ ದೆಹಲಿ ಬಿಜೆಪಿ ವಕ್ತಾರ ತಜೀಂದರ್ ಪಾಲ್ ಸಿಂಗ್ ಬಗ್ಗಾ ಅವರು ಪೊಲೀಸ್ ಠಾಣೆಯಲ್ಲಿ ಶನಿವಾರ ದೂರು ದಾಖಲಿಸಿದ್ದಾರೆ.
ಗುರುದ್ವಾರವು ಭಕ್ತಿ ಪ್ರಧಾನವಾದ ಸ್ಥಳವಾಗಿದೆ. ಇಲ್ಲಿಗೆ ಮದ್ಯಪಾನ ಮಾಡಿ ಬರುವುದು ಸರಿಯಲ್ಲ. ಜವಾಬ್ದಾರಿಯುತ ಸ್ಥಾನದಲ್ಲಿರುವವರು ಈ ರೀತಿಯಾಗಿ ನಡೆದುಕೊಂಡಿರುವುದು ಶೋಭೆಯಲ್ಲಿ. ಈ ನಿಟ್ಟಿನಲ್ಲಿ ಮಾನ್ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪಂಜಾಬ್ ಪೊಲೀಸ್ ಮಹಾನಿರ್ದೇಶಕರಿಗೆ ಅವರು ಮನವಿ ಮಾಡಿದ್ದಾರೆ. ಅಲ್ಲದೆ ತಮ್ಮ ಟ್ವಿಟರ್ ಖಾತೆಯಲ್ಲಿ ದೂರಿನ ಸ್ಕ್ರೀನ್ ಶಾಟ್ ಪ್ರಕಟಿಸಿ ಸಿಎಂ ಭಗವಂತ್ ಮಾನ್ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಮದ್ಯಪಾನದ ಆರೋಪವನ್ನು ಸಿಎಂ ಭಗವಂತ್ ಮಾನ್ ಇದು ಎರಡನೇ ಬಾರಿ ಎದುರಿಸುತ್ತಿದ್ದು, ಈ ಹಿಂದೆ ಕಳೆದ ಎರಡು ದಿನಗಳ ಹಿಂದೆ ಏಪ್ರಿಲ್ 14 ರಂದು ದೇಶಾದ್ಯಂತ ಆಚರಿಸಲಾದ ಬೈಸಾಖಿ ಸಂದರ್ಭದಲ್ಲಿ ತಖ್ತ್ ದಮದಾಮಾ ಸಾಹಿಬ್ಗೆ ಸಿಎಂ ಮದ್ಯಪಾನ ಮಾಡಿ ಪ್ರವೇಶಿಸಿದ್ದಾರೆ ಎಂದು ಶಿರೋಮಣಿ ಗುರುದ್ವಾರ ಪರ್ಬಂಧಕ್ ಸಮಿತಿ ಆರೋಪಿಸಿತ್ತು. ಅಲ್ಲದೆ, ಅವರು ತತ್ಕ್ಷಣ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿತ್ತು.