ಹೊಸಪೇಟೆ, ಏ 16 (DaijiworldNews/DB): ಹೊಸಪೇಟೆಯಲ್ಲಿ ನಡೆಯುತ್ತಿರುವ ಬಿಜೆಪಿ ಕಾರ್ಯಕಾರಿಣಿ ಸಭೆಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಬೈಕ್ನಲ್ಲಿ ತೆರಳುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ನಡೆಯುತ್ತಿರುವ ಬಿಜೆಪಿ ರಾಜ್ಯ ಕಾರ್ಯ ಕಾರಿಣಿಯಲ್ಲಿ ಪಾಲ್ಗೊಳ್ಳಲು ಸಚಿವರು ತಮ್ಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಈ ಸಂದರ್ಭ ಹೊಸಪೇಟೆ ಗ್ರಾಮೀಣ ಭಾಗದಲ್ಲಿ ಎರಡು ಕಾರುಗಳ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಗಾಯಾಳುಗಳಾಗಿದ್ದವರನ್ನು ತಮ್ಮ ವಾಹನದ ಮೂಲಕ ಆಸ್ಪತ್ರೆಗೆ ಕಳುಹಿಸಿಕೊಟ್ಟು ತಾವು ಅಲ್ಲೇ ಇದ್ದ ಬೈಕ್ ಸವಾರನ ಜೊತೆಗೆ ಹಿಂಬದಿಯಲ್ಲಿ ಕುಳಿತು ಕಾರ್ಯಕಾರಿಣಿ ಸಭೆಗೆ ಹೋಗಿದ್ದಾರೆ. ಅಪಘಾತ ಸಂಭವಿಸಿದ ಸ್ಥಳದಿಂದ ಸಭೆ ನಡೆಯುವ ಸ್ಥಳಕ್ಕೆ ಐದು ಕಿಮೀ ದೂರವಿದ್ದು, ಬೈಕ್ ಮುಖಾಂತರವೇ ಅಷ್ಟು ದೂರ ಸಾಗಿದ್ದಾರೆ. ಸಚಿವ ಕರಂದ್ಲಾಜೆ ಬೈಕಿನಲ್ಲಿ ತೆರಳಿರುವ ದೃಶ್ಯವನ್ನು ಸ್ಥಳದಲ್ಲಿರುವವರು ವೀಡಿಯೋ ಚಿತ್ರೀಕರಿಸಿ, ಫೋಟೋಗಳನ್ನೂ ಕ್ಲಿಕ್ಕಿಸಿದ್ದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಗಾಯಾಳುಗಳಿಗೆ ತಮ್ಮ ವಾಹನ ನೀಡಿ ತಾವು ಬೈಕಿನಲ್ಲಿ ತೆರಳಿದ ಸಚಿವೆಯ ಕ್ರಮಕ್ಕೆ ಸಾರ್ವಜನಿಕ ವಲಯದಿಂದ ಮೆಚ್ಚುಗೆ ವ್ಯಕ್ತವಾಗಿದೆ.