ಪ್ರಯಾಗ್ರಾಜ್, ಏ 16 (DaijiworldNews/DB): ಉತ್ತರ ಪ್ರದೇಶದ 'ಬಿಜೆಪಿ 2.0' ಸರ್ಕಾರವು ಅಪರಾಧದಲ್ಲಿ ಮುಳುಗಿದೆ ಎಂದು ಎಸ್ಪಿ ನಾಯಕ ಅಖಿಲೇಶ್ ಯಾದವ್ ಟೀಕಿಸಿದ್ದಾರೆ.
ಉತ್ತರ ಪ್ರದೇಶದ ಪ್ರಯಾಗ್ರಾಜ್ ಜಿಲ್ಲೆಯಲ್ಲಿ ಮೂವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಐವರು ಶವವಾಗಿ ಪತ್ತೆಯಾದ ಘಟನೆಗೆ ಸಂಬಂಧಿಸಿದಂತೆ ಅವರು ಹೇಳಿಕೆ ನೀಡಿ, ಈ ಸರ್ಕಾರ ಅಪರಾಧ ಪ್ರಕರಣಗಳಲ್ಲಿ ಮುಳುಗಿ ಹೋಗಿದೆ ಎಂದಿದ್ದಾರೆ.
ಜಿಲ್ಲೆಯ ನವಾಬ್ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಖಗಲ್ಪುರ ಗ್ರಾಮದಲ್ಲಿ ಈವರು ಶವವಾಗಿ ಪತ್ತೆಯಾಗಿದ್ದರು. ಕುಟುಂಬದ ಯಜಮಾನ ರಾಹುಲ್ (42), ಆತನ ಪತ್ನಿ ಪ್ರೀತಿ (38), ಪುತ್ರಿಯರಾದ ಮಹಿ (15), ಪಿಹು (13) ಮತ್ತು ಕುಹು (11) ಸಾವನ್ನಪ್ಪಿದವರು. ಆದರೆ ಇದಕ್ಕೆ ಪ್ರತಿಕ್ರಿಯಿಸಿರುವ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಅಗರವಾಲ್, ಇದೊಂದು ಕೊಲೆ ಮತ್ತು ಆತ್ಮಹತ್ಯೆ ಪ್ರಕರಣವಾಗಿದೆ. ಕುಟುಂಬದ ಯಜಮಾನ ರಾಹುಲ್ ತನ್ನ ಪತ್ನಿ ಹಾಗೂ ಮೂವರು ಮಕ್ಕಳನ್ನು ಕೊಲೆ ಮಾಡಿ ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿಸಿದ್ದಾರೆ.