ಬೆಂಗಳೂರು, ಏ 16 (DaijiworldNews/DB): ಮಾಗಡಿ ರಸ್ತೆಯ ಕೆಂಚನಹಳ್ಳಿಯಲ್ಲಿ ಮನೆಯಲ್ಲಿ ಆಟವಾಡುತ್ತಿದ್ದಾಗ ಉಯ್ಯಾಲೆಯ ತಂತಿಗೆ ಸಿಲುಕಿಕೊಂಡು 11 ವರ್ಷದ ಬಾಲಕಿಯೊಬ್ಬಳು ಉಸಿರುಗಟ್ಟಿ ಮೃತಪಟ್ಟಿರುವ ಘಟನೆ ನಡೆದಿದೆ.
ಭಾವನಾ ದೀಕ್ಷಿತ್ ಮೃತಪಟ್ಟ ಬಾಲಕಿ. ಈಕೆ ಪೋಷಕರು ನೆಲ ಮಹಡಿಯಲ್ಲಿದ್ದರೆ, ಭಾವನಾ ಮೊದಲ ಮಹಡಿಯಲ್ಲಿ ಭಾವನಾ ಆಟವಾಡುತ್ತಿದ್ದಳು. ಆದರೆ ಎಷ್ಟು ಹೊತ್ತಾದರೂ ಮಗಳು ಮನೆಗೆ ಬಾರದ ಹಿನ್ನೆಲೆಯಲ್ಲಿ ಆಟವಾಡುತ್ತಿದ್ದ ಸ್ಥಳಕ್ಕೆ ಹೋಗಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ತತ್ಕ್ಷಣ ಬಾಲಕಿಯನ್ನು ಮಾಗಡಿ ರಸ್ತೆಯಲ್ಲಿರುವ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಬಾಲಕಿ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.
ಬಳಿಕ ವೈದ್ಯರು ಮೆಡಿಕೋ-ಲೀಗಲ್ ಪ್ರಕರಣವೆಂದು ದಾಖಲು ಮಾಡಿಕೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಪೊಲೀಸರು ಆಗಮಿಸಿ ಬಾಲಕಿ ತಂದೆ ರವಿ ಕುಮಾರ್ ದೀಕ್ಷಿತ್ ಅವರ ಹೇಳಿಕೆ ಪಡೆದುಕೊಂಡು ಸಿಆರ್'ಪಿಸಿಯ ಸೆಕ್ಷನ್ 174 ರ ಅಡಿಯಲ್ಲಿ ಅಸಹಜ ಸಾವಿನ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಾಲಕಿ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.