ಹೊಸದಿಲ್ಲಿ, ಏ 16 (DaijiworldNews/DB): ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ನಿವಾಸದ ಮೇಲೆ ದಾಳಿ ನಡೆಸಿ ಬಂಧನಕ್ಕೊಳಗಾಗಿ ಬಳಿಕ ಜಾಮೀನಿನ ಮೇಲೆ ಬಿಡುಗಡೆಗೊಂಡ ಎಂಟು ಮಂದಿ ಆರೋಪಿಗಳಿಗೆ ದೆಹಲಿ ಬಿಜೆಪಿ ಕಚೇರಿಯಲ್ಲಿ ಹೂಹಾರ ಹಾಕಿ ಸನ್ಮಾನ ಮಾಡಲಾಗಿದೆ.
ಪಕ್ಷದ ರಾಜ್ಯ ಘಟಕದ ಮುಖ್ಯಸ್ಥ ಆದೇಶ್ ಗುಪ್ತಾ ಈ ಸನ್ಮಾನ ನೆರವೇರಿಸಿದ್ದಾರೆ. ಆರೋಪಿಗಳೆಲ್ಲರೂ ಬಿಜೆಪಿಯ ಯುವ ಘಟಕ ಭಾರತೀಯ ಜನತಾ ಯುವ ಮೋರ್ಚಾದ ಸದಸ್ಯರು.
ಈ ಕುರಿತು ಟ್ವೀಟ್ ಮಾಡಿರುವ ಗುಪ್ತಾ, ಹಿಂದೂ ವಿರೋಧಿ ಕೇಜ್ರೀವಾಲ್ ವಿರುದ್ದ ಪ್ರತಿಭಟಿಸಿ ಬಿಜೆಪಿಯ ಎಂಟು ಮಂದಿ ಯುವ ಕಾರ್ಯಕರ್ತರು ಜೈಲು ಪಾಲಾದರು. ಇದೀಗ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾರೆ. ಇವರನ್ನು ಯುವ ಕ್ರಾಂತಿಕಾರಿಗಳು ಎಂದು ಪರಿಗಣಿಸಿ ಸನ್ಮಾನ ಮಾಡಲಾಗಿದೆ. ಹಿಂದೂ ವಿರೋಧಿ ಶಕ್ತಿಗಳು ಯಾರೇ ಆದರೂ ನಮ್ಮ ಕಾರ್ಯಕರ್ತರು ಹೋರಾಡುತ್ತಾರೆ ಎಂದಿದ್ದಾರೆ.
ಬಿಜೆಪಿಯ ಕ್ರಮವನ್ನು ಎಎಪಿ ಶಾಸಕಿ ಅತಿಶಿ ಖಂಡಿಸಿದ್ದು, ಗೂಂಡಾಗಿರಿ, ಅನ್ಯಾಯದ ಹಾದಿ ತುಳಿದರೆ ಸನ್ಮಾನ ಮಾಡಲಾಗುವುದು ಎಂಬ ಸಂದೇಶವನ್ನು ಬಿಜೆಪಿ ರವಾನಿಸಿದೆ. ಬಿಜೆಪಿ ಗೂಂಡಾಗಿರಿ ಮಾಡುವವರಿಗೆ ಆದ್ಯತೆ ನೀಡಿದರೆ, ಎಎಪಿ ವಿದ್ಯಾವಂತರನ್ನು ಪರಿಗಣಿಸುತ್ತದೆ ಎಂದು ಹೇಳಿದ್ದಾರೆ.