ಆಗ್ರಾ, ಏ 16 (DaijiworldNews/DB): ಹಿಂದೂ ಯುವತಿಯನ್ನು ಅಪಹರಿಸಲಾಗಿದೆ ಎಂದು ಆರೋಪಿಸಿ ಮುಸ್ಲಿಂ ಯುವಕನ ಕುಟುಂಬಕ್ಕೆ ಸೇರಿದ ಎರಡು ಮನೆಗಳಿಗೆ ಬಲಪಂಥೀಯ ಸಂಘಟನೆಗಳ ಕಾರ್ಯಕರ್ತರು ಬೆಂಕಿ ಹಚ್ಚಿದ ಘಟನೆ ಆಗ್ರಾದಲ್ಲಿ ನಡೆದಿದೆ.
ಜಿಮ್ ಮಾಲಕನಾಗಿರುವ ಯುವಕ ಸಾಜಿದ್ ಅವರಿಗೆ ಸೇರಿದ ರುನಕ್ತಾ ಬಡಾವಣೆಯಲ್ಲಿರುವ ಎರಡು ಮನೆಗಳಿಗೆ ಬೆಂಕಿ ಹಚ್ಚಲಾಗಿದೆ. ಇದೊಂದು ಲವ್ ಜಿಹಾದ್ ಪ್ರಕರಣ ಎಂದು ಆರೋಪಿಸಿ ಧರಮ್ ಜಾಗರಣ್ ಸಮನ್ವಯ್ ಸಂಘ ಎಂಬ ಸಂಘಟನೆಯು ಈ ಕೃತ್ಯ ನಡೆಸಿದ್ದು, ಘಟನೆ ಸಂಬಂಧ ಎಂಟು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಥಮ ಪಿಯುಸಿ ವಿದ್ಯಾರ್ಥಿನಿಯಾಗಿರುವ ಯುವತಿ ಸೋಮವಾರ ನಾಪತ್ತೆಯಾಗಿದ್ದು, ಕುಟುಂಬದವರ ದೂರಿನ ಮೇರೆಗೆ ಆಕೆಯನ್ನು ಎರಡು ದಿನಗಳ ಹಿಂದೆ ಪೊಲೀಸರು ಪತ್ತೆ ಹಚ್ಚಿದ್ದರು. ಆದರೆ ಸಾಜಿದ್ ಕುರಿತು ಪೊಲೀಸರಿಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ನಾಪತ್ತೆ ದೂರಿನ ಹಿನ್ನೆಲೆಯಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 366ರ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆದರೆ ಯುವತಿ ಈ ಕುರಿತು ವೀಡಿಯೋ ಮಾಡಿದ್ದು, ತಾನು ಪ್ರಾಪ್ತ ವಯಸ್ಕಳಾಗಿದ್ದು, ಸ್ವ ಇಚ್ಚೆಯಿಂದ ತೆರಳಿದ್ದೇನೆ ಎಂಬುದಾಗಿ ವೀಡಿಯೋದಲ್ಲಿ ಹೇಳಿಕೊಂಡಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.