ಎಚ್ .ಡಿ.ಕೋಟೆ, ಏ 16 (DaijiworldNews/DB): ಪರ್ಸೆಂಟೇಜ್ ರಾಜಕಾರಣ ವಿಚಾರದಲ್ಲಿ ಯಾರೂ ಸತ್ಯವಂತರಲ್ಲ. ಬಿಜೆಪಿ, ಕಾಂಗ್ರೆಸ್ ಎರಡೂ ಪಕ್ಷದವರು ಪರಸ್ಪರ ಗೂಬೆ ಕೂರಿಸುತ್ತಿದ್ದಾರೆ. ಆದರೆ ಯಾರೂ ಸಾಚಾಗಳಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದ್ದಾರೆ.
ಜನತಾ ಜಲಧಾರೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಗಾರರೊಂದಿಗೆ ಶನಿವಾರ ಮಾತನಾಡಿದ ಅವರು, ಭ್ರಷ್ಟಾಚಾರ ಎಲ್ಲಾ ಕಡೆ ತುಂಬಿದೆ. ರಾಜಕೀಯ ವ್ಯವಸ್ಥೆ ಕೆಟ್ಟಿದೆ. ಪರ್ಸೆಂಟೇಜ್ ರಾಜಕಾರಣ ವಿಚಾರ ಎತ್ತಿಕೊಂಡು ಕಾಂಗ್ರೆಸ್-ಬಿಜೆಪಿ ಪರಸ್ಪರ ಕೆಸರೆರಚಾಟದಲ್ಲಿ ತೊಡಗಿವೆ. ಆದರೆ ನಿಜವಾಗಿಯೂ ಯಾರು ಸತ್ಯವಂತರಲ್ಲ. ಕಾಂಗ್ರೆಸ್ ಅವಧಿಯಲ್ಲಿಯೂ ಹಲವು ಘಟನೆಗಳು ನಡೆದು ಹೋಗಿವೆ ಎಂದರು.
ಈ ಹಿಂದೆ ಕಾಂಗ್ರೆಸ್ ಆಡಳಿತದಲ್ಲಿದ್ದಾಗ ಪ್ರಧಾನಿ ನರೇಂದ್ರ ಮೋದಿಯವರು 10 ಪರ್ಸೆಂಟ್ ಸರ್ಕಾರ ಎಂದು ಆರೋಪಿಸಿದ್ದರು. ಆದರೆ ನಾನು ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಈಗಲೂ ಅಷ್ಟೇ ಎಂದವರು ಇದೇ ವೇಳೆ ತಿಳಿಸಿದರು.
ನನ್ನ ಮಗ ಪಿಡಬ್ಲ್ಯೂಡಿ ಸಚಿವನಾಗಲೀ, ನೀರಾವರಿ ಸಚಿವನಾಗಲೀ ಆಗಿಲ್ಲ. ಹಾಗಾಗಿ ಗುತ್ತಿಗೆದಾರರ ಸಂಘದ ಪರ್ಸೆಂಟೇಜ್ ಆರೋಪ ವಿಚಾರಕ್ಕೂ ನನಗೂ ಸಂಬಂಧವಿಲ್ಲ ಎಂದರು. ಬಿಜೆಪಿಯೊಂದಿಗೆ ಚುನಾವಣಾಪೂರ್ವ ಮೈತ್ರಿ ಬಗ್ಗೆ ಸುಮ್ಮನೇ ಮಾತನಾಡುತ್ತಾರೆ. ನಮ್ಮ ಕಾರ್ಯಕ್ರಮಗಳಿಗೆ ಅನಗತ್ಯ ಮಾತನಾಡುವ ಉದ್ದೇಶ ಕೆಲವರದು. ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳುವ ಅವಶ್ಯವಿಲ್ಲ ಎಂದವರು ಇದೇ ವೇಳೆ ತಿಳಿಸಿದರು.
ಕೃಷ್ಣರಾಜ ಸಾಗರ ಜಲಾಶಯದ ಬಳಿ ಜನತಾ ಜಲಧಾರೆ ರಥಕ್ಕೆ ಅವರು ಚಾಲನೆ ನೀಡಿದರು. ಇದಕ್ಕೂ ಮುನ್ನ ಡ್ಯಾಂ ಮುಂಭಾಗ ಇರುವ ಕಾವೇರಿ ಮಾತೆಗೆ ಪೂಜೆ ಸಲ್ಲಿಸಿದರು. ವೇದಬ್ರಹ್ಮ ಭಾನುಪ್ರಕಾಶ್ ಶರ್ಮಾ ನೇತೃತ್ವದಲ್ಲಿ ಜಲಧಾರೆ ಕಾರ್ಯಕ್ರಮದ ಪೂಜಾ ವಿಧಿಗಳನ್ನು ನೆರವೇರಿಸಲಾಯಿತು. ಜೆಡಿಎಸ್ ಶಾಸಕರಾದ ಸಿ.ಎಸ್. ಪುಟ್ಟರಾಜು, ರವೀಂದ್ರ ಶ್ರೀಕಂಠಯ್ಯ, ಸುರೇಶ್ ಗೌಡ, ತಮ್ಮಣ್ಣ, ಅನ್ನದಾನಿ, ಕೆ.ಟಿ. ಶ್ರೀಕಂಠೇಗೌಡ ಭಾಗವಹಿಸಿದ್ದರು.