ಶ್ರೀನಗರ, ಏ 16 (DaijiworldNews/DB): ಜಮ್ಮು ಕಾಶ್ಮೀರದ ರಾಜೌರಿ ಜಿಲ್ಲೆಯ ಹೆದ್ದಾರಿ ಮತ್ತು ಸೇನಾ ಶಿಬಿರದ ಬಳಿ ಶನಿವಾರ ಐದು ಕೆಜಿ ತೂಕದ ಸುಧಾರಿತ ಸ್ಫೋಟಕ ಸಾಧನ ಪತ್ತೆಯಾಗಿದ್ದು, ಭದ್ರತಾ ಪಡೆಗಳು ಯಶಸ್ವಿಯಾಗಿ ಇದನ್ನು ನಿಷ್ಕ್ರಿಯಗೊಳಿಸಿದ್ದಾರೆ. ಆ ಮೂಲಕ ಭಯೋತ್ಪಾದನಾ ಸಂಚನ್ನು ವಿಫಲಗೊಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಐಇಡಿಯನ್ನು ನಿಷ್ಕ್ರಿಯಗೊಳಿಸಿದ ಬಳಿಕ ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ದು ನಾಶಪಡಿಸಲಾಯಿತು ಎಂದು ರಜೌರಿ ಜಿಲ್ಲಾ ಪೊಲೀಸರು ತಿಳಿಸಿದ್ದಾರೆ.
ರಜೌರಿ ಗುರ್ದನ್ ರಸ್ತೆಯಲ್ಲಿರುವ ಗುರ್ದನ್ ಚಾವಾ ಗ್ರಾಮದಲ್ಲಿ ಕೆಲವರು ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದಾರೆ ಎಂಬುದಾಗಿ ಮಾಹಿತಿ ಬಂದಿತ್ತು. ಮಾಹಿತಿ ಆಧಾರಿತವಾಗಿ ಸೇನೆ ವಿಶೇಷ ಕಾರ್ಯಾಚರಣೆ ನಡೆಸಿತ್ತು. ಮುಂಜಾನೆಯಿಂದಲೇ ಶೋಧ ಕಾರ್ಯ ನಡೆದಿತ್ತು. ಈ ವೇಳೆ ಪತ್ತೆಯಾದ ಅನುಮಾನಾಸ್ಪದ ವಸ್ತುವನ್ನು ಪರಿಶೀಲಿಸಿದಾಗ ಸುಧಾರಿತ ಸ್ಪೋಟಕ ಸಾಧನ ಪತ್ತೆಯಾಯಿತು. ಹೀಗಾಗಿ ಅದನ್ನು ನಿಷ್ಕ್ರಿಯಗೊಳಿಸಿ ನಾಶಗೊಳಿಸಲಾಗಿದೆ ಎಂದು ಜಮ್ಮು ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ.