ನವದೆಹಲಿ, ಏ 16 (DaijiworldNews/MS): ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನಿವಾಸದ ಮೇಲಿನ ದಾಳಿಗೆ ಸಂಬಂಧಿಸಿದಂತೆ ಬಂಧಿಸಿ ನಂತರ ಜಾಮೀನಿನ ಮೇಲೆ ಬಿಡುಗಡೆಯಾದ ಎಂಟು ಮಂದಿಯನ್ನು ಗುರುವಾರ ದೆಹಲಿ ಬಿಜೆಪಿಯೂ ಸನ್ಮಾನಿಸಿದ್ದು, ಇದಕ್ಕೆ ಆಮ್ ಆದ್ಮಿ ಪಕ್ಷದಿಂದ (ಎಎಪಿ) ತೀವ್ರವಾಗಿ ಖಂಡಿಸಿದ್ದು, ಕೇಸರಿ ಪಕ್ಷ ಗೂಂಡಾಗಿರಿಯನ್ನು ಉತ್ತೇಜಿಸುತ್ತಿದೆ ಎಂದು ಹೇಳಿದೆ.
ದೆಹಲಿ ಬಿಜೆಪಿ ಕಚೇರಿಯಲ್ಲಿ ಪಕ್ಷದ ರಾಜ್ಯ ಘಟಕದ ಮುಖ್ಯಸ್ಥ ಆದೇಶ್ ಗುಪ್ತಾ ಅವರು ಎಂಟು ಮಂದಿಗೆ ಸನ್ಮಾನಿಸಿ, ಟ್ವೀಟ್ ಮಾಡಿ, 'ಹಿಂದೂ ವಿರೋಧಿ ಕೇಜ್ರಿವಾಲ್ ವಿರುದ್ಧ ಪ್ರತಿಭಟನೆ ನಡೆಸಿ ಜೈಲು ಪಾಲಾದ ಬಿಜೆಪಿ ಯುವ ಮೋರ್ಚಾದ ಎಂಟು ಕಾರ್ಯಕರ್ತರು 14 ದಿನಗಳ ನಂತರ ನ್ಯಾಯಾಲಯದಿಂದ ಜಾಮೀನು ಪಡೆದರು. ಇಂದು ರಾಜ್ಯ ಕಚೇರಿಯಲ್ಲಿ ಈ ಯುವ ಕ್ರಾಂತಿಕಾರಿಗಳನ್ನು ಸ್ವಾಗತಿಸುತ್ತಿದ್ದೇವೆ. ನಮ್ಮ ಪ್ರತಿಯೊಬ್ಬ ಕಾರ್ಯಕರ್ತರು ಹಿಂದೂ ವಿರೋಧಿ ಶಕ್ತಿಗಳ ವಿರುದ್ಧ ಸದಾ ಹೋರಾಡುತ್ತಾರೆ' ಎಂದು ಬರೆದುಕೊಂಡಿದ್ದಾರೆ.
ಚಂದರ್ ಕಾಂತ್ ಭಾರದ್ವಾಜ್, ನವೀನ್ ಕುಮಾರ್, ನೀರಜ್ ದೀಕ್ಷಿತ್, ಸನ್ನಿ, ಜಿತೇಂದರ್ ಸಿಂಗ್ ಬಿಷ್ತ್, ಪ್ರದೀಪ್ ಕುಮಾರ್ ತಿವಾರಿ, ರಾಜು ಕುಮಾರ್ ಸಿಂಗ್ ಮತ್ತು ಬಬ್ಲು ಕುಮಾರ್ ಅವರು ಹೈಕೋರ್ಟ್ನಿಂದ ಜಾಮೀನು ಪಡೆದವರಾಗಿದ್ದಾರೆ.
"ಮುಖ್ಯಮಂತ್ರಿಯವರ ಮನೆ ಮೇಲೆ ದಾಳಿದ ಹಂತಕರಿಗೆ ಹೂಮಾಲೆ ಹಾಕಿ ಬಿಜೆಪಿ ಅಭಿನಂದಿಸುತ್ತಿದೆ. ಬಿಜೆಪಿಯು ಗೂಂಡಾಗಳನ್ನು ಸೇರಿಸುವುದು ಮಾತ್ರವಲ್ಲದೆ ಗೂಂಡಾವಾದ ಮತ್ತು ರೌಡಿಸಂ ಅನ್ನು ಉತ್ತೇಜಿಸುತ್ತದೆ ಎಂಬುದನ್ನು ಇದು ಸಾಬೀತುಪಡಿಸುತ್ತದೆ" ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಈ ಕುರಿತು ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.