ಬೆಂಗಳೂರು, ಏ 16 (DaijiworldNews/MS): ವಿಜಯನಗರದ ಹೊಸಪೇಟೆಯಲ್ಲಿಇಂದಿನಿಂದ ನಡೆಯಲಿರುವ ಬಿಜೆಪಿ ರಾಜ್ಯ ಕಾರ್ಯಕಾರಿಣಿಗೆ ಸಭೆಗೆ , ರಾಜ್ಯ ಸರ್ಕಾರದ ವಿರುದ್ಧದ ಶೇ 40 ಕಮಿಷನ್ ಆರೋಪ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ರಾಜೀನಾಮೆ ಪ್ರಕರಣದ ಕರಿಮೋಡ ಆವರಿಸಿದೆ.
ವಿಜಯನಗರ ಜಿಲ್ಲೆಯ ಕೇಂದ್ರಸ್ಥಾನ ಹೊಸಪೇಟೆಯಲ್ಲಿ ಶನಿವಾರದಿಂದ ಎರಡು ದಿನಗಳ ಕಾಲ ಕಾರ್ಯಕಾರಿಣಿ ಸಭೆ ನಡೆಯಲಿದ್ದು, ಇದಕ್ಕಾಗಿ ಉತ್ಸಾಹದಲ್ಲಿ ಇದ್ದ ಬಿಜೆಪಿ ನಾಯಕರಿಗೆ ಈ ಸಂದರ್ಭದಲ್ಲೇ ಕಾಂಗ್ರೆಸ್ ನ 40% ಕಮಿಷನ್ ಆರೋಪ ಬಿಜೆಪಿಗೆ ಇರಿಸು ಮುರಿಸು ತಂದಿದೆ.
ಕಾರ್ಯಕಾರಿಣಿ ಉದ್ಘಾಟನೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಆಗಮಿಸುತ್ತಿಲ್ಲ. ಇದರ ಬದಲಾಗಿ ನಾಳೆ ಬೆಳಿಗ್ಗೆ 11 ಗಂಟೆಗೆ ಜೆ.ಪಿ ನಡ್ಡಾ ಆಗಮಿಸುವ ಸಾಧ್ಯತೆ ಇದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮಾಜಿ ಮುಖ್ಯಮಂತ್ರಿಗಳು, ಸಚಿವರು, ಶಾಸಕರು ಸೇರಿದಂತೆ 800 ಪ್ರತಿನಿಧಿಗಳು ಕಾರ್ಯಕಾರಿಣಿಯಲ್ಲಿ ಭಾಗವಹಿಸಲಿದ್ದಾರೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಯೋಜನೆಗಳ ಕುರಿತು ಪ್ರಚಾರ, ಬೆಲೆ ಏರಿಕೆ ವಿರುದ್ಧದ ಆಕ್ರೋಶ ತಣಿಸಲು ಕಾರ್ಯತಂತ್ರ ರೂಪಿಸುವುದು ಸೇರಿದಂತೆ ಚುನಾವಣೆಯನ್ನೇ ಕೇಂದ್ರೀಕರಿಸಿಕೊಂಡು ಬಿಜೆಪಿ ನಾಯಕರು ಕಾರ್ಯಕಾರಿಣಿಯಲ್ಲಿ ಚರ್ಚಿಸಲು ಕಾರ್ಯಸೂಚಿ ಸಿದ್ಧಪಡಿಸಿಕೊಂಡಿದ್ದಾರೆ ಎನ್ನಲಾಗಿದೆ
ಇನ್ನೊಂದೆಡೆ ಎರಡು ದಿನಗಳ ಕಾಲ ನಡೆಯುವ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಗೆ ವಿಜಯನಗರ ಜಿಲ್ಲೆ ಮಧುವಣಗಿತ್ತಿಯಂತೆ ಶೃಂಗಾರಗೊಂಡಿದೆ.