ಮಂಡ್ಯ, ಏ 15 (DaijiworldNews/DB): ದಲಿತರನ್ನು ಮುಖ್ಯಮಂತ್ರಿ ಮಾಡಲಾಗುವುದು ಎಂಬ ಎಚ್ಡಿಕೆ ಹೇಳಿಕೆ ಕೇವಲ ನಾಟಕ. ಅವರ ಕುಟುಂಬದವರ ಹೊರತು ಇನ್ನೊಬ್ಬರಿಗೆ ಅಧಿಕಾರ ನೀಡಲಾರರು ಎಂದು ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ ವ್ಯಂಗ್ಯವಾಡಿದ್ದಾರೆ.
ಸುದ್ದಿಗಾರರ ಜೊತೆ ಶುಕ್ರವಾರ ಮಾತನಾಡಿದ ಅವರು, ನಾಟಕ, ಕಣ್ಣೀರಿನ ಮೂಲಕ ಜನರನ್ನು ಭಾವನಾತ್ಮಕವಾಗಿ ಮೋಸ ಮಾಡುವುದು ಕುಮಾರಸ್ವಾಮಿಯವರಿಗೆ ಕರಗತವಾಗಿದೆ. ಜಲಧಾರೆ ಎಂಬ ಹೊಸ ನಾಟಕವನ್ನು ಈಗ ಮಾಡುತ್ತಿದ್ದಾರೆ. ಅವರ ಕುಟುಂಬದ ಹೊರತು ಬೇರೆ ಯಾರೂ ಅಧಿಕಾರಕ್ಕೇರುವುದು ಅವರಿಗೆ ಇಷ್ಟವಿಲ್ಲ. ಅವರನ್ನು ನಂಬಿದ ಇತರ ನಾಯಕರಿಗೂ ಅನ್ಯಾಯ ಮಾಡಿದ್ದಾರೆ ಎಂದರು.
ಜೆಡಿಎಸ್ ಎಂದಿಗೂ ಜನರಿಂದ ತಿರಸ್ಕರಿಸಲ್ಪಡುವ ಪಕ್ಷ. ಅವರೊಂದಿಗೆ ಹೊಂದಾಣಿಕೆಯ ಸಹವಾಸ ಬಿಜೆಪಿ ಎಂದಿಗೂ ಮಾಡುವುದಿಲ್ಲ. ಅವರಿಗೆ ರಾಜಕೀಯ ಮಾಡುವುದು ಬಿಟ್ಟು ಬೇರೇನೂ ಬಾರದು ಎಂದು ಟೀಕಿಸಿದರು.
ಭ್ರಷ್ಟಾಚಾರ, ಸ್ವಜನ ಪಕ್ಷಪಾತಗಳಿಗೆ ಕಾಂಗ್ರೆಸ್ ಪಕ್ಷವೇ ಕಾರಣ. ಈಶ್ವರಪ್ಪ ರಾಜೀನಾಮೆ ಕಾಂಗ್ರೆಸ್ ಹೋರಾಟಕ್ಕೆ ಸಿಕ್ಕ ಜಯ ಎಂಬುದಾಗಿ ಆ ಪಕ್ಷದವರು ಹೇಳುತ್ತಿದ್ದಾರೆ. ಆದರೆ ವಾಸ್ತವವಾಗಿ ಇಡೀ ದೇಶ ಕಾಂಗ್ರೆಸ್ ಮುಕ್ತವಾದ ದಿನ ಅದು ಜನರಿಗೆ ಸಿಕ್ಕ ಜಯವಾಗುತ್ತದೆ. ಬಿಜೆಪಿ ಸರ್ಕಾರದ ಮೇಲೆ 40 ಪರ್ಸೆಂಟ್ ಸರ್ಕಾರ ಎಂದು ಆಪಾದನೆ ಮಾಡುತ್ತಿರುವ ಕಾಂಗ್ರೆಸ್ ಪಕ್ಷವೇ 40 ಪರ್ಸೆಂಟ್ ಸಂಸ್ಕೃತಿಯನ್ನು ಹುಟ್ಟು ಹಾಕಿ ಬೆಳೆಸಿರುವುದು ಎಂದು ಅಶ್ವತ್ಥ ನಾರಾಯಣ ಕಾಂಗ್ರೆಸ್ಸಿಗರಿಗೆ ತಿರುಗೇಟು ನೀಡಿದರು.
ಸಂಸದೆ ಸುಮಲತಾ ಅತ್ಯುತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಬಿಜೆಪಿ ಸೇರಬೇಕೆಂಬ ಆಸೆ ಇದೆ. ಬರುವುದಾದರೆ ಖಂಡಿತಾ ಸ್ವಾಗತಿಸುವುದಾಗಿ ಇದೇ ವೇಳೆ ಅವರು ತಿಳಿಸಿದರು.