ಬೆಂಗಳೂರು, ಏ 15 (DaijiworldNews/DB): ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ ಮಿತಿ ಮೀರಿದ್ದು, ಸೂಕ್ತ ರೀತಿಯ ತನಿಖೆ ನಡೆದಲ್ಲಿ ಇನ್ನೂ ಹಲವರು ರಾಜೀನಾಮೆ ಕೊಡಬೇಕಾದೀತು ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ವಿಧಾನಸೌಧದಲ್ಲಿ ಅಹೋರಾತ್ರಿ ಧರಣಿಯ ವೇಳೆ ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿದ ಅವರು, ಗೃಹ ಇಲಾಖೆ, ಪಂಚಾಯತ್ ರಾಜ್, ಸಮಾಜಕಲ್ಯಾಣ ಇಲಾಖೆಗಳಲ್ಲಿ ನಡೆದಿರುವ ಭ್ರಷ್ಟಾಚಾರದ ಬಗ್ಗೆ ತನಿಖೆಯಾದರೆ ನಾಲ್ವರ ರಾಜೀನಾಮೆ ಖಚಿತವಾಗಲಿದೆ. ಸಮಾಜ ಕಲ್ಯಾಣ ಇಲಾಖೆಯ ಇಬ್ಬರು ಮಾಜಿ ಹಾಗೂ ಒಬ್ಬ ಹಾಲಿ ಸಚಿವ ಕೂಡಾ ರಾಜೀನಾಮೆ ಕೊಡಬೇಕಾದೀತು ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.
ಈಶ್ವರಪ್ಪ ಅವರ ಭ್ರಷ್ಟಾಚಾರ ವಿಚಾರಕ್ಕೆ ಮಾತ್ರ ನಮ್ಮ ಹೋರಾಟ ಅಲ್ಲ. ಭ್ರಷ್ಟಾಚಾರದಿಂದ ಜನರಿಗಾಗುತ್ತಿರುವ ಮೋಸವನ್ನು ತಡೆಯುವ ಉದ್ದೇಶ ನಮ್ಮದು. 2019ರಿಂದ ಕೊಳವೆ ಬಾವಿ ಟೆಂಡರ್ ಪ್ರಕ್ರಿಯೆಯಲ್ಲಿ ಅವ್ಯವಹಾರ ನಡೆದಿದ್ದಲ್ಲದೆ, ಸಚಿವರೊಬ್ಬರು ಕಿಕ್ಬ್ಯಾಕ್ ಪಡೆದಿದ್ದಾರೆ ಎಂಬ ಆರೋಪವೂ ಕೇಳಿ ಬಂದಿತ್ತು. ಪಿಎಸ್ಐ ಹುದ್ದೆಗಳ ನೇಮಕಾತಿ ವಿಚಾರದಲ್ಲಿ ಕೇಳಿ ಬಂದಿರುವ ಭ್ರಷ್ಟಾಚಾರ ಆರೋಪದ ಬಗ್ಗೆ ಎರಡು ತಿಂಗಳಾದರೂ ಇನ್ನೂ ತನಿಖೆ ನಡೆದಿರಲಿಲ್ಲ. ಈಗ ಎಚ್ಚೆತ್ತುಕೊಂಡು ತನಿಖೆಗೆ ಆದೇಶಿಸಿದ್ದಾರೆ. ಇಷ್ಟು ದಿನ ಈ ವಿಚಾರದಲ್ಲಿ ಮೌನ ವಹಿಸಿದ್ದೇಕೆ ಎಂದು ಪ್ರಶ್ನಿಸಿದ ಅವರು, ಪಿಎಸ್ಐ ನೇಮಕಾತಿಯಲ್ಲಿ ನಡೆದಿರುವ ಅಕ್ರಮದ ಬಗ್ಗೆ ತನಿಖೆಯಾದರೆ ಇನ್ನೆರಡು ಮಂದಿ ರಾಜೀನಾಮೆ ಕೊಡಬೇಕಾಗಿ ಬರಬಹುದು ಎಂದರು.
ಇಎಸ್ಐ ನೇಮಕಾತಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಾಗಿರುವ ಶಾಲೆ ಬಿಜೆಪಿ ಕಾರ್ಯದರ್ಶಿಗೆ ಸೇರಿದ್ದಾಗಿದ್ದು, ಅವರ ಮನೆಗೆ ಗೃಹ ಸಚಿವರು ಭೇಟಿ ನೀಡಿದ್ದಾರೆ. ಈ ಬಗ್ಗೆ ದಾಖಲೆಗಳೂ ಇದ್ದು, ಮುಂದಿನ ದಿನಗಳಲ್ಲಿ ದಾಖಲೆ ಬಿಡುಗಡೆ ಮಾಡಲಾಗುವುದು ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.