ಗದಗ, ಏ 15 (DaijiworldNews/HR): ಭಾರತದಲ್ಲಿ ಭ್ರಷ್ಟಾಚಾರ ಪರಂಪರೆ ಆರಂಭಿಸಿದ್ದೇ ಕಾಂಗ್ರೆಸ್. ಎಲ್ಲಾ ರಂಗದಲ್ಲೂ ಕಾಂಗ್ರೆಸ್ನವರು ಭ್ರಷ್ಟಾಚಾರ ಹಬ್ಬಿಸಿದ್ದರು. ಹಾಗಾಗಿ ಜನ ಅವರನ್ನು ಮನೆಗೆ ಕಳಿಸಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ ಸಂಬಂಧ ಪಕ್ಷಕ್ಕಾಗುವ ಮುಜುಗರ ತಪ್ಪಿಸಲು ಸಚಿವ ಈಶ್ವರಪ್ಪ ರಾಜೀನಾಮೆ ಘೋಷಿಸಿದ್ದು, ಕಾಂಗ್ರೆಸ್ನವರು ಹತಾಶರಾಗಿ ನಮ್ಮ ನಾಯಕರ ಮೇಲೆ ಸುಖಾ ಸುಮ್ಮನೆ ಆರೋಪ ಮಾಡ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿತ್ತು. ಎಸ್ಸಿ-ಎಸ್ಟಿ ಹಾಸ್ಟೆಲ್ ಮಕ್ಕಳಿಗೆ ಹಾಸಿಗೆ, ದಿಂಬು ಕೊಡುವಲ್ಲೂ ಭ್ರಷ್ಟಾಚಾರ ಮಾಡಿದ್ದಾರೆ ಎಂದರು.
ಇನ್ನು ವಿರೋಧ ಪಕ್ಷವಾಗಿ ನೀವು ವಿಫಲರಾಗಿದ್ದೀರಿ. ಸಾವಿನ ಮನೆಯಲ್ಲಿ ರಾಜಕೀಯ ಲಾಭದ ಎಣಿಕೆ ಮಾಡುವ ಬುದ್ಧಿ ಬಿಡಿ. ವಿರೋಧ ಪಕ್ಷದಲ್ಲಿ ತೊಳಲಾಟ ಶುರುವಾಗಿದೆ. ಅದನ್ನೆಲ್ಲ ಬಿಟ್ಟು ನಮ್ಮ ನಾಯಕ ಈಶ್ವರಪ್ಪ ಮೇಲೆ ಗೂಬೆ ಕೂರಿಸೋ ಪ್ರಯತ್ನ ನಡೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.