ಕಾರವಾರ, ಏ 15 (DaijiworldNews/DB): ಚುನಾವಣೆ ಸಮೀಪಿಸುತ್ತಿರುವುದರಿಂದ ಪ್ರತಿದಿನ ಏನಾದರೊಂದು ವಿಷಯ ಇಟ್ಟುಕೊಂಡು ಸಮಸ್ಯೆ ಸೃಷ್ಟಿಸುವುದು ಕಾಂಗ್ರೆಸ್ಗೆ ರೂಢಿಯಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಟೀಕಿಸಿದ್ದಾರೆ.
ಅಂಕೋಲಾ ತಾಲೂಕಿನ ಅಚವೆ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿದ ಅವರು, ದಿನಕ್ಕೊಂದು ಸಮಸ್ಯೆ ಸೃಷ್ಟಿಸುವುದು, ಸರ್ಕಾರದ ವಿರುದ್ದ ಆಪಾದನೆ ಹೊರಿಸುವುದು ಅವರ ಪರಿಪಾಠವಾಗಿದೆ. ಆದರೆ ಅವರ ಅಧಿಕಾರಾವಧಿಯಲ್ಲಿ ಏನೇನು ನಡೆದಿದೆ ಎಂಬುದನ್ನು ಹೇಳಲು ಸಿದ್ದರಿಲ್ಲ. ಗರೀಬಿ ಹಠಾವೋ ಘೋಷಣೆ ಬಿಟ್ಟರೆ ಬಡವರನ್ನು ತುಳಿಯುವ ಕೆಲಸವನ್ನು ನಿರಂತರ ಮಾಡಿಕೊಂಡು ಬಂದಿದ್ದಾರೆ ಎಂದರು.
ಚುನಾವಣೆ ಸಮೀಪಿಸುತ್ತಿರುವುದರಿಂದ ಕಾಂಗ್ರೆಸ್ಸಿಗರು ಸರ್ಕಾರದ ವಿರುದ್ದ ಆಪಾದನೆಗಿಳಿದಿದ್ದಾರೆ. ಮುಂದೆ ಇದು ಮತ್ತಷ್ಟು ಜಾಸ್ತಿಯಾಗಬಹುದು. ಅಧಿಕಾರ ನಿಮ್ಮ ಕೈಲಿದ್ದಾಗ ಏನು ಮಾಡಿದ್ದೀರಿ ಎಂದು ಕೇಳಿದರೆ, ನಾವು ತಪ್ಪು ಮಾಡಿದ್ದೇವೆ, ನೀವು ಒಳ್ಳೆ ಕೆಲಸ ಮಾಡಿ ಎಂದು ಉಪದೇಶ ಮಾಡಲು ಬರುತ್ತಾರೆ ಎಂದವರು ವಾಗ್ದಾಳಿ ನಡೆಸಿದರು.
ಈಶ್ವರಪ್ಪ ಪ್ರಕರಣದಲ್ಲಿ ಕಾನೂನು ಪ್ರಕಾರವೇ ಕ್ರಮವಾಗಲಿದೆ. ಕಾನೂನಿನ ಅಡಿಯಲ್ಲಿ ಎಲ್ಲರೂ ಸಮಾನರು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.