ಶಿವಮೊಗ್ಗ, ಏ 15 (DaijiworldNews/DB): ಗಣಪತಿ ದೇವಸ್ಥಾನಕ್ಕೆ ಹೋಗಿ ಇಂದು ಪೂಜೆ ಮಾಡಿಸಿದ್ದೇನೆ. ಈ ವೇಳೆ ಬಲಗಡೆಯಿಂದ ಹೂವು ಬಿದ್ದಿದೆ. ಅಷ್ಟು ದೊಡ್ಡ ಪ್ರಸಾದ ಬಲಗಡೆಯಿಂದ ಬಿದ್ದಿದ್ದನ್ನು ನೋಡಿದ್ದು ಇದೇ ಮೊದಲು. ಇದು ಶುಭಸೂಚನೆಯಾಗಿದ್ದು, ಪ್ರಾಮಾಣಿಕ, ಸತ್ಯದ ಹಾದಿಯಲ್ಲಿ ನಡೆಯುತ್ತಿದ್ದೇನೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು .ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ.
ತೇವರ ಚಟ್ನಹಳ್ಳಿಯ ಶುಭಶ್ರೀ ಸಮುದಾಯ ಭವನ ಆವರಣದಲ್ಲಿ ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿದ ಅವರು, ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ನನ್ನ ವಿರುದ್ಧ ಷಡ್ಯಂತ್ರ ಮಾಡಲಾಗಿದೆ. ಶೀಘ್ರ ನಾನು ಆಪಾದನೆಯಿಂದ ಮುಕ್ತನಾಗುತ್ತೇನೆಂಬ ನಂಬಿಕೆಯಿದೆ. ಸಮುದಾಯ ಭವನದ ಆವರಣದಲ್ಲಿರುವ ಗಣಪತಿ ದೇವಳದಲ್ಲಿ ಪೂಜೆ ನಡೆಸಿದ ವೇಳೆ ದೇವರ ಬಲಗಡೆಯಿಂದ ಹೂ ಬಿದ್ದಿದೆ. ಇದು ಆಶ್ಚರ್ಯ ಮತ್ತು ಸಂತೋಷ ಎರಡನ್ನೂ ಉಂಟು ಮಾಡಿದೆ. ನನ್ನ ಪ್ರಾಮಾಣಿಕತೆ ಮತ್ತು ಸತ್ಯದ ಹಾದಿಯಲ್ಲಿ ನಡೆಯುತ್ತಿರುವುದಕ್ಕೆ ಇದೇ ಸಾಕ್ಷಿಯಾಗಿದೆ ಎಂದರು.
ನನ್ನ ಮೇಲೆ ಬಂದಿರುವ ಆಪಾದನೆ ನನಗೆ ಅಗ್ನಿಪರೀಕ್ಷೆ. ಬೆಂಬಲಿಗರು, ಅನುಯಾಯಿಗಳಿಗೆ ಇದರಿಂದ ತುಂಬಾ ನೋವಾಗಿದೆ. ಆದರೆ ಇದರಿಂದ ಗೆದ್ದು ಬರುವೆನೆಂಬುದಾಗಿ ಅವರಿಗೆ ಮನವರಿಕೆ ಮಾಡಿದ್ದೇನೆ. ಪಕ್ಷದ ನಾಯಕರ ಬೆಂಬಲದೊಂದಿಗೆ ಶೀಘ್ರ ಆರೋಪಮುಕ್ತನಾಗಿ ಹೊರ ಬರುವ ವಿಶ್ವಾಸವಿದೆ ಎಂದರು.
ಮಾಜಿ ಮುಖ್ಯಮಂತ್ರಿ ಬಿಎಸ್ವೈ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಪಕ್ಷದ ಹಲವು ನಾಯಕರು ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ. ನನ್ನ ವಿರುದ್ದ ಷಡ್ಯಂತ್ರ ನಡೆಸಿದವರಿಗೆ ಮುಂದಿನ ದಿನಗಳಲ್ಲಿ ತಕ್ಕ ಉತ್ತರ ಸಿಗಲಿದೆ ಎಂದು ಹೇಳಿದರು.