ಬೆಂಗಳೂರು, ಏ 15 (DaijiworldNews/HR): ಸಂತೋಷ್ ಪಾಟೀಲ್ ಆತ್ಮಹತ್ಯೆಗೆ ಪ್ರೇರಣೆ ನೀಡಿರುವ ಸಚಿವ ಈಶ್ವರಪ್ಪ ಅವರು ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಳಂಕಿತರ ರಕ್ಷಣೆಗೆ ಮುಂದಾಗಿ ಅಪರಾಧ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕಿಡಿಕಾರಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆಗೆ ಸಚಿವ ಈಶ್ವರಪ್ಪ ಹಾಗೂ ಅವರ ಆಪ್ತ ಸಹಾಯಕರ 40 % ಲಂಚದ ಕಿರುಕುಳವೇ ಕಾರಣ ಎಂದು ಮೃತ ವ್ಯಕ್ತಿ ವಾಟ್ಸಾಪ್ ಸಂದೇಶ ರವಾನಿಸಿದ್ದು, ಮೃತನ ಪತ್ನಿ, ತಾಯಿ ಹಾಗೂ ಪಂಚಾಯ್ತಿ ಅಧ್ಯಕ್ಷರು ಪ್ರತ್ಯಕ್ಷದರ್ಶಿಗಳಾಗಿ ಇದೇ ಹೇಳಿಕೆ ನೀಡಿದ್ದಾರೆ. ಮೃತನ ಸಹೋದರ ಪೊಲೀಸರಿಗೆ ನೀಡಿರುವ ದೂರಿನಲ್ಲೂ ಇದನ್ನೇ ಹೇಳಿದ್ದಾರೆ ಎಂದರು.
ಇನ್ನು ಈ ಪ್ರಕರಣದ ತನಿಖೆ ನಡೆಯುವ ಮುನ್ನವೇ ಮುಖ್ಯಮಂತ್ರಿಗಳು ಈಶ್ವರಪ್ಪ ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳಿದ್ದಾರೆ. ಹೀಗಾಗಿ ಪೊಲೀಸರು ಈ ಪ್ರಕರಣದ ನ್ಯಾಯಯುತ ತನಿಖೆ ನಡೆಸಲು ಹೇಗೆ ಸಾಧ್ಯ? ಸಚಿವರ ರಕ್ಷಣೆಗಾಗಿ ಮುಖ್ಯಮಂತ್ರಿಗಳು ಕೊಟ್ಟಿರುವ ಹೇಳಿಕೆ ಪೊಲೀಸ್ ತನಿಖೆ ಮೇಲೆ ಪ್ರಭಾವ ಬೀರುವುದಿಲ್ಲವೇ? ಎಮ್ದು ಪ್ರಶ್ನಿದ್ದಾರೆ.