ಶಿವಮೊಗ್ಗ, ಏ 15 (DaijiworldNews/DB): ಸಂತೋಷ್ ಪಾಟೀಲ್ ಆತ್ಮಹತ್ಯೆ ವಿಚಾರವಾಗಿ ಕೇಳಿ ಬರುತ್ತಿರುವ ಕಮಿಷನ್ ದಂಧೆ ಆರೋಪದ ಹಿಂದೆ ಕಾಂಗ್ರೆಸ್ ಕೈವಾಡವಿದೆ. ಎಲ್ಲಾ ಆರೋಪಗಳಿಂದ ಈಶ್ವರಪ್ಪ ಮುಕ್ತರಾಗಲಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕರಣದಲ್ಲಿ ಈಶ್ವರಪ್ಪ ಅವರ ವಿರುದ್ದ ಕಮಿಷನ್ ದಂಧೆ ಆರೋಪ ಕೇಳಿ ಬರುತ್ತಿದೆ. ಆದರೆ ಈ ಆರೋಪದ ಹಿಂದೆ ಕಾಂಗ್ರೆಸ್ ಪಕ್ಷ ಕೆಲಸ ಮಾಡುತ್ತಿದೆ. ಈಶ್ವರಪ್ಪ ಅವರು ಆರೋಪ ಮುಕ್ತರಾಗಲಿದ್ದಾರೆ ಎಂಬ ವಿಶ್ವಾಸವಿದೆ ಎಂದರು.
ಸಂತೋಷ್ ಪಾಟೀಲ್ ಅವರದ್ದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬ ಸಂಶಯ ವ್ಯಕ್ತವಾಗುತ್ತಿದೆ. ತನಿಖೆ ಬಳಿಕವಷ್ಟೇ ಸತ್ಯಾಂಶ ಹೊರ ಬೀಳಲಿದೆ. ಸದ್ಯ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಟ ವಿಷ್ಣುವರ್ಧನ್ ಅವರ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ತನಿಖೆಯ ವರದಿ ಬಂದ ಬಳಿಕ ವಾಸ್ತವ ಏನೆಂಬುದು ಗೊತ್ತಾಗಲಿದೆ ಎಂದವರು ತಿಳಿಸಿದರು.