ಬೆಂಗಳೂರು, ಏ 15 (DaijiworldNews/HR): ನಿಮ್ಮ ತಟ್ಟೆಯಲ್ಲಿ ಸತ್ತು ಹೆಗ್ಗಣವೇ ಬಿದ್ದಿರುವಾಗ ಬೇರೆಯವರ ತಟ್ಟೆಯಲ್ಲಿ ನೊಣ ಬಿದ್ದಿದ್ದನ್ನು ನೋಡಿ ನಗಬೇಡಿ. ಕಾಲಚಕ್ರ ಉರುಳಲೇಬೇಕು ಎಂದು ಶಾಸಕ ಎಂ.ಪಿ ರೇಣುಕಾಚಾರ್ಯ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಸರಣಿ ಟ್ವಿಟ್ ಮಾಡಿರುವ ಅವರು, ಮಾನ್ಯ ಪ್ರತಿಪಕ್ಷದ ನಾಯಕರಾದ ಸಿದ್ಧರಾಮಯ್ಯ ನವರೇ ನಿಮ್ಮ ಪಕ್ಷದಲ್ಲೇ ಕೂತಿರುವ ' ಆ ಮಹಾನ್ ನಾಯಕ ' ಮುಂದೊಂದು ದಿನ ನಿಮಗೂ ಕೂಡ ಖೆಡ್ಡಾ ತೋಡಬಹುದು. ಬೆನ್ನಿಗೆ ಚೂರಿ ಇರಿಯುವ ಮೊದಲು ಯಾವುದಕ್ಕೂ ಹುಷಾರು! ಅಧಿಕಾರದ ಹಪಾಹಪಿತನಕ್ಕೆ ಬಿದ್ದಿರುವ 'ಬಂಡೆ' ಈಗ ಎಲ್ಲೋ ಕುಳಿತು ಇನ್ನೆಲ್ಲೋ ಬಾಂಬ್ ಸಿಡಿಸುವ ಕಲೆಯನ್ನು ರಕ್ತಗತ ಮಾಡಿಕೊಂಡಿದೆ ಎಂದರು.
ಮುಂದಿನ ದಿನಗಳಲ್ಲಿ ಇದು ನಿಮ್ಮ ಕೊರಳಿಗೆ ಉರಳಾದರೂ ಅಚ್ಚರಿಯಿಲ್ಲ. ಬೇಗ ಎಚ್ಚೆತ್ತುಕೊಳ್ಳಿ ಸಿದ್ದರಾಮಯ್ಯರೇ! 2023 ರ ಚುನಾವಣೆಯಲ್ಲಿ ಆ ಮಹಾನ್ ನಾಯಕನಿಗೆ ನೀವೇ ಪ್ರಬಲ ಸ್ಪರ್ಧೆ. ನಿಮಗೆ ಗೊತ್ತಿಲ್ಲದಂತೆಯೇ ಮುಗಿಸಲು ಯಾವುದಾದರೂ ಹೊಸ ನಾಟಕ ಸೃಷ್ಟಿಸಬಹುದು. ಅಧಿಕಾರಕ್ಕಾಗಿ ಏನನ್ನೂ ಮಾಡದೆ ಬಿಡುವವರಲ್ಲ ' ಸ್ವಯಂಘೋಷಿತ ಡೈನಾಮಿಕ್ ಬಂಡೆ' ಎಂದಿದ್ದಾರೆ.
ಇನ್ನು ಎದುರಾಳಿಗಳ ವಿರುದ್ಧ ರಣರಂಗದಲ್ಲಿ ಹೋರಾಡುವ ಬದಲು ' ವ್ಯವಸ್ಥಿತ ಜಾಲ' ರೂಪಿಸಿಕೊಂಡು ಖೆಡ್ಡಾಕ್ಕೆ ಬೀಳಿಸಲು ನುರಿತ ತಂಡವನ್ನು ಕಟ್ಟಿಕೊಂಡಿದ್ದಾರೆ. ಹಗಲು ಕಂಡು ಇರಳಿನಲ್ಲಿ ಬಾವಿಗೆ ಬೀಳಬೇಡಿ ಸಿದ್ದರಾಮಯ್ಯ ನವರೇ! ಕುರ್ಚಿಗಾಗಿ ಏನು ಬೇಕಾದರೂ ಮಾಡುವ ಜಾಯಮಾನ ನಮ್ಮದು ಎಂಬುದನ್ನು ' ಬಂಡೆಯ ' ಇತಿಹಾಸವೇ ಹೇಳುತ್ತದೆ ಎಂದು ಹೇಳಿದ್ದಾರೆ.