ಗದಗ, ಏ 15 (DaijiworldNews/DB): ಈಶ್ವರಪ್ಪ ಅವರ ಬಂಧಿಸುವ ವಿಚಾರ ತನಿಖಾಧಿಕಾರಿಗಳಿಗೆ ಬಿಟ್ಟದ್ದಾಗಿದೆ. ಅವರನ್ನು ಬಂಧಿಸಬೇಕು ಎಂದು ಹೇಳಲು ಕಾಂಗ್ರೆಸ್ಸಿಗರಿಗೆ ಯಾವುದೇ ನೈತಿಕತೆ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿದ ಅವರು, ಈಶ್ವರಪ್ಪ ಅವರು ಈಗಾಗಲೇ ಸ್ವಯಂಪ್ರೇರಿತವಾಗಿ ರಾಜೀನಾಮೆ ನೀಡಿದ್ದಾರೆ. ಸಂತೋಷ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದ್ದು, ಈಶ್ವರಪ್ಪ ಅವರನ್ನು ಬಂಧಿಸಬೇಕೋ ಬೇಡವೋ ಎಂಬುದನ್ನು ತನಿಖಾಧಿಕಾರಿಗಳು ನಿರ್ಧರಿಸುತ್ತಾರೆ. ಅವರ ನಿರ್ಧಾರ ಪ್ರಕಟಗೊಳ್ಳುವವರೆಗೆ ಕಾಯಬೇಕು ಎಂದರು.
ಈ ಹಿಂದೆ ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಕೆ.ಜೆ. ಜಾರ್ಜ್ ಮೇಲೆ ಆರೋಪ ಕೇಳಿ ಬಂದಾಗ ತನಿಖಾ ಹಂತದಲ್ಲಿ ಅವರನ್ನು ಅಧಿಕಾರಿಗಳು ಬಂಧಿಸಿರಲಿಲ್ಲ. ಸಿಬಿಐಗೆ ಪ್ರಕರಣ ವರ್ಗಾವಣೆಯಾದಾಗಲೂ ಅವರನ್ನು ಬಂಧನಕ್ಕೆ ಒಳಪಡಿಸಲಿಲ್ಲ. ಹಾಗೆಯೇ ಈಶ್ವರಪ್ಪ ಅವರ ಬಂಧನ ವಿಚಾರವನ್ನು ತನಿಖಾಧಿಕಾರಿಗಳೇ ನಿರ್ಧರಿಸಬೇಕೇ ಹೊರತು ನಾವೇನು ಹೇಳಲು ಬರುವುದಿಲ್ಲ. ಅಷ್ಟಕ್ಕೂ ಅವರ ಬಂಧನಕ್ಕೆ ಒತ್ತಾಯಿಸಲು ಕಾಂಗ್ರೆಸ್ಸಿಗರಿಗೆ ಯಾವ ನೈತಿಕತೆಯೂ ಇಲ್ಲ ಎಂದವರು ಕಾಂಗ್ರೆಸ್ ಮುಖಂಡರಿಗೆ ತಿರುಗೇಟು ನೀಡಿದರು.
ಜಿಲ್ಲಾಉಸ್ತುವಾರಿ ಸಚಿವ ಬಿ.ಸಿ. ಪಾಟೀಲ್, ಲೋಕೋಪಯೋಗಿ ಇಲಾಖೆ ಸಚಿವ ಸಿ.ಸಿ.ಪಾಟೀಲ್, ಶಾಸಕ ಕಳಜಪ್ಪ ಬಂಡಿ, ಎಸದ. ವಿ. ಸಂಕನೂರ, ಅನಿಲ್ ಮೆಣಸಿನಕಾಯಿ, ನಗರಸಭೆ ಅಧ್ಯಕ್ಷೆ ಉಷಾ ಮಹೇಶ ದಾಸರ ಮತ್ತಿತರರು ಉಪಸ್ಥಿತರಿದ್ದರು.