ಮುಂಬೈ, ಏ 15 (DaijiworldNews/DB): ಮಸೀದಿಗಳ ಧ್ವನಿವರ್ಧಕ ವಿವಾದ ವಿಚಾರದಲ್ಲಿ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಮುಖ್ಯಸ್ಥ ರಾಜ್ ಠಾಕ್ರೆ ನಿಲುವನ್ನು ಖಂಡಿಸಿ ಎಂಎನ್ಎಸ್ ರಾಜ್ಯ ಕಾರ್ಯದರ್ಶಿ ಇರ್ಫಾನ್ ಶೇಖ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಗುರುವಾರ ರಾಜೀನಾಮೆ ಸಲ್ಲಿಸಿದ್ದಾರೆ.
ತಮ್ಮ ರಾಜೀನಾಮೆ ಕುರಿತಂತೆ ಫೇಸ್ಬುಕ್ನಲ್ಲಿ ಠಾಕ್ರೆಗೆ ಪತ್ರ ಬರೆದ ಶೇಖ್, ರಾಜೀನಾಮೆ ನೀಡುತ್ತಿರುವುದಕ್ಕೆ ಮನಸ್ಸು, ಹೃದಯ ಭಾರವಾಗುತ್ತಿದೆ. ಸರ್ವಸ್ವವೆಂದೇ ದುಡಿದ ಪಕ್ಷವು ಸಮುದಾಯ ದ್ವೇಷದ ನಿಲುವನ್ನು ತೆಗೆದುಕೊಂಡರೆ ಪಕ್ಷ ತೊರೆಯುವ ಸಮಯ ಬಂದಿದೆ ಎಂದು ಬರೆದುಕೊಂಡಿದ್ದಾರೆ.
ಜಾತಿರಹಿತ ರಾಜಕಾರಣದ ಬದ್ಧತೆಯೊಂದಿಗೆ ಸ್ಥಾಪನೆಯಾದ ಪಕ್ಷದ ಸಿದ್ದಾಂತ ಪ್ರಸ್ತುತ ಬದಲಾದಂತೆ ಕಾಣುತ್ತಿದೆ. ರಾಜ್ ಸಾಹೇಬ್ ಠಾಕ್ರೆಯವರಿಂದ ಭರವಸೆ ಹೆಚ್ಚಿತ್ತು. ಆದರೆ ಗುಡಿ ಪಾಡ್ವಾ ರ್ಯಾಲಿ ವೇಳೆ ದ್ವೇಷದ ರಾಜಕಾರಣವನ್ನು ನಾವು ಗಮನಿಸಿದ್ದೇವೆ ಎಂದವರು ಹೇಳಿದ್ದಾರೆ.
ಎಂಎನ್ಎಸ್ ಮುಖ್ಯಸ್ಥರೊಂದಿಗೆ 16 ವರ್ಷ ಕೆಲಸ ಮಾಡಿದ್ದೇನೆ. ಆದರೆ ಇಲ್ಲಿವರೆಗೆ ಆಝಾನ್ ಬಗ್ಗೆ ಬಾರದ ಅನುಮಾನ ಅವರಿಗೆ ಈಗ ಯಾಕೆ ಬಂದಿತು ಎಂದವರು ಇದೇ ವೇಳೆ ಪತ್ರದಲ್ಲಿ ಪ್ರಶ್ನಿಸಿದ್ದಾರೆ.