ಬೆಂಗಳೂರು, ಏ 14 (DaijiworldNews/SM): ಕಮಿಷನ್ ಆರೋಪ ಎದುರಿಸುತ್ತಿರುವ ಈಶ್ವರಪ್ಪ ಸುಳ್ಳು ಹೇಳಿದ್ದರು. ಆದರೆ, ನಮ್ಮ ಹೋರಾಟಕ್ಕೆ ಮಣಿದು ಇದೀಗ ರಾಜೀನಾಮೆ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
"ಮೃತ ಸಂತೋಷ್ ಪಾಟೀಲ್ ಅವರು ಈಶ್ವರಪ್ಪ ವಿರುದ್ಧ ಕಮಿಷನ್ ಕೇಳಿ ಕಿರುಕುಳ ನೀಡುತ್ತಿದ್ದರೆಂದು ಮಾಡಿದ ಆರೋಪವನ್ನು ಆರಂಭದಲ್ಲಿ ತಳ್ಳಿಹಾಕಿದ್ದರು. ಅಲ್ಲದೆ, ಆತ ಯಾರು ಎಂದು ತನಗೆ ಗೊತ್ತಿಲ್ಲ. ನನ್ನ ವಿರುದ್ಧ ಆರೋಪ ಶುದ್ಧ ಸುಳ್ಳು. ನಾನು ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದಿದ್ದರು. ಪರಿಚಯವೇ ಇಲ್ಲದ ವ್ಯಕ್ತಿಯ ವಿರುದ್ಧ ಈಶ್ವರಪ್ಪ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದು ಹೇಗೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಇದೀಗ ಈಶ್ವರಪ್ಪಗೆ ತನ್ನ ತಪ್ಪಿನ ಅರಿವಾಗಿದೆ. ಈ ಹಿನ್ನೆಲೆಯಲ್ಲಿ ತನ್ನ ನಿರ್ಧಾರವನ್ನು ಬದಲಾಯಿಸಿದ್ದಾರೆ. ಹಾಗೂ ರಾಜೀನಾಮೆ ನೀಡುತ್ತಿದ್ದಾರೆ ಎಂದು ನಾನು ಭಾವಿಸಿದ್ದೇನೆ" ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.