ಕೊಡಗು, ಏ 14 (DaijiworldNews/DB): ಕಮಿಷನ್ ವ್ಯವಹಾರ ಕೊಡಗಿನಲ್ಲೂ ನಡೆಯುತ್ತಿದೆ. ಇಲ್ಲವೆಂದಾದರೆ ಅದನ್ನು ಜಿಲ್ಲೆಯ ಇಬ್ಬರು ಶಾಸಕರು ಸಾಬೀತುಪಡಿಸಲಿ ಎಂದು ಜಿಲ್ಲಾ ಗುತ್ತಿಗೆದಾರರ ಸಂಘದ ಅಧ್ಯಕ್ಷ ರವಿ ಚೆಂಗಪ್ಪ ಸವಾಲೆಸೆದಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, 2019ರಿಂದ ಇಲ್ಲಿಯವರೆಗೆ ನಡೆದ ಕಾಮಗಾರಿಗಳಿಗೆ ಹಣವೇ ಬಿಡುಗಡೆಯಾಗಿಲ್ಲ. 45 ಕೋಟಿ ರೂ. ಬಿಡುಗಡೆಯಾಗಲು ಇನ್ನೂ ಬಾಕಿ ಇದೆ. ಶಾಸಕರಾದ ಕೆ.ಜಿ. ಬೋಪಯ್ಯ ಹಾಗೂ ಅಪ್ಪಚ್ಚು ರಂಜನ್ ಅವರು ಹಣ ಬಿಡುಗಡೆಯಾಗದಿರಲು ಕಾರಣವೇನೆಂದು ಹೇಳಲಿ. ಅಲ್ಲದೆ ಅವರು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಕಚೇರಿಗೆ ಸೋಮವಾರ ಬಂದು ಯಾವುದೇ ಕಮಿಷನ್ ಪಡೆದಿಲ್ಲ ಎಂಬುದನ್ನು ಸಾಬೀತುಪಡಿಸಲಿ. ಹಾಗೆಯೇ ಒಂದು ಪೈಸೆಯನ್ನೂ ಮುಟ್ಟದೆ ಹಣ ಬಿಡುಗಡೆ ಮಾಡಿಸಲಿ ಎಂದರು.
ಈ ಹಿಂದೆ ಮೈಸೂರಿನಲ್ಲಿ ಚುನಾವಣಾ ರ್ಯಾಲಿಯಲ್ಲಿ ಪ್ರಧಾನಿ ಭಾಗವಹಿಸಿದ್ದಾಗ 10 ಪರ್ಸೆಂಟ್ ಸರ್ಕಾರ ಎಂದು ಆರೋಪಿಸಿದ್ದರು. ಆದರೆ ಪ್ರಸ್ತುತ 40 ಪರ್ಸೆಂಟ್ ಕಮಿಷನ್ ನೀಡಬೇಕಾಗಿ ಬಂದಿದೆ. ಇಷ್ಟು ದೊಡ್ಡ ಮೊತ್ತ ಕೇಳಿದರೆ ಗುಣಮಟ್ಟದ ಕಾಮಗಾರಿ ಸಾಧ್ಯವೇ ಎಂದವರು ಪ್ರಶ್ನಿಸಿದರು.