ಬೆಂಗಳೂರು, ಏ 14 (DaijiworldNews/DB): ಹಿಜಾಬ್ ನಿಷೇಧದ ವಿರುದ್ದ ಹೋರಾಟದಲ್ಲಿರುವ ವಿದ್ಯಾರ್ಥಿನಿಯೋರ್ವಳು ಸಿಎಂ ಬಸವರಾಜ ಬೊಮ್ಮಾಯಿಯವರಿಗೆ ಟ್ವೀಟ್ ಮಾಡಿ ನಿಮಗೆ ಇನ್ನೂ ಸಮಯವಿದೆ. ನಮ್ಮ ಭವಿಷ್ಯ ಹಾಳಾಗುವುದನ್ನು ತಡೆಯಿರಿ ಎಂದು ಮನವಿ ಮಾಡಿದ್ದಾರೆ.
ಹಿಜಾಬ್ನ್ನು ಶಿಕ್ಷಣ ಸಂಸ್ಥೆಗಳಲ್ಲಿ ಧರಿಸುವಂತಿಲ್ಲ ಎಂದು ಹೈಕೋರ್ಟ್ ಆದೇಶ ನೀಡಿದ ಬಳಿಕ ಹಿಜಾಬ್ ಪರ ಇದ್ದವರು ಸುಪ್ರೀಂ ಕೋರ್ಟ್ ಬಾಗಿಲು ತಟ್ಟಿದ್ದರು. ಆದರೆ ಸುಪ್ರೀಂಕೋರ್ಟ್ನಲ್ಲಿ ಇನ್ನೂ ಇದು ವಿಚಾರಣೆಗೆ ಬಂದಿಲ್ಲ. ಈ ನಡುವೆ ಏಪ್ರಿಲ್ 22ರಿಂದ ದ್ವಿತೀಯ ಪಿಯುಸಿ ಪರೀಕ್ಷೆಗಳು ಆರಂಭವಾಗುವ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿ ಈ ಟ್ವೀಟ್ ಮಾಡಿದ್ದಾಳೆ.
ಅಲಿಯಾ ಅಸ್ಸಾದಿ ಎಂಬ ವಿದ್ಯಾರ್ಥಿನಿ ಟ್ವೀಟ್ ಮಾಡಿದ್ದು, ಹಿಜಾಬ್ ಅಥವಾ ಹೆಡ್ ಸ್ಕಾರ್ಫ್ ಮೇಲೆ ವಿಧಿಸಲಾದ ನಿಷೇಧವು ಪಿಯುಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿನಿಯರ ಮೇಲೆ ಪರಿಣಾಮ ಬೀರುತ್ತದೆ. ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸುವುದರ ಮೂಲಕ ನಮ್ಮ ಭವಿಷ್ಯ ಹಾಳಾಗುವುದನ್ನು ತಡೆಯಲು ನಿಮಗೆ ಇನ್ನೂ ಅವಕಾಶವಿದೆ. ನಾವು ಈ ದೇಶದ ಭವಿಷ್ಯ ಎಂದು ಟ್ವೀಟಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಟ್ಯಾಗ್ ಮಾಡಿದ್ದಾರೆ.
ರಾಜ್ಯದಲ್ಲಿ ಹಿಜಾಬ್ ನಿಷೇಧದ ವಿರುದ್ದ ಸುಪ್ರೀಂಕೋರ್ಟ್ಗೆ ಹೋದವರಲ್ಲಿ ಈಕೆಯೂ ಒಬ್ಬರು. ಅಲಿಯಾ ರಾಜ್ಯ ಮಟ್ಟದ ಕರಾಟೆ ಪಟುವಾಗಿದ್ದಾರೆ.