ವಾರಣಾಸಿ, ಏ 14 (DaijiworldNews/DB): ಸೀರೆ ನೇಯ್ಗೆ ಘಟಕಕ್ಕೆ ಬೆಂಕಿ ಹೊತ್ತಿಕೊಂಡು ನಾಲ್ವರು ಸಜೀವದಹನವಾದ ಘಟನೆ ವಾರಣಾಸಿಯಲ್ಲಿ ನಡೆದಿದೆ.
ಅಶ್ಫಾಕ್ ನಗರದ ಮನೆಯೊಂದರಲ್ಲಿ ಮದನಪುರದ ವ್ಯಕ್ತಿಯೊಬ್ಬರು ಸೀರೆ ನೇಯ್ಗೆಯಲ್ಲಿ ತೊಡಗಿದ್ದರು. ಗುರುವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಘಟನೆ ನಡೆದಿದೆ. 12 ಅಡಿ* 10 ಅಡಿ ಕೊಠಡಿಯಲ್ಲಿ ಕೆಲಸ ಮಾಡಲಾಗುತ್ತಿತ್ತು. ಸಿಂಥೆಟಿಕ್ ಸೀರೆಯ ಫೋಮ್ ಮತ್ತು ಫಿನಿಶಿಂಗ್ ಸಾಮಗ್ರಿಗಳನ್ನು ಕೊಠಡಿಯಲ್ಲಿ ಇರಿಸಲಾಗಿತ್ತು. ಈ ಸಾಮಾಗ್ರಿಗಳ ಮೂಲಕ ಬೆಂಕಿ ಹರಡಿ ಇಡೀ ಕೋಣೆಯನ್ನು ವ್ಯಾಪಿಸಿದೆ.
ಕೊಠಡಿಯಲ್ಲಿದ್ದ ನಾಲ್ವರು ಬೆಂಕಿಯಿಂದ ರಕ್ಷಿಸಿಕೊಳ್ಳಲೆತ್ನಿಸಿದರೂ ಸಾಧ್ಯವಾಗದೆ ಒಂದೇ ಕುಟುಂಬದ ನಾಲ್ಕೂ ಜನ ಸಜೀವದಹನಗೊಂಡಿದ್ದಾರೆ. ಈ ಮನೆ ಕಿರಿದಾದ ಓಣಿಯಲ್ಲಿದ್ದು, ಅಗ್ನಿಶಾಮಕ ದಳ ಆಗಮಿಸುವುದಕ್ಕೂ ಮುನ್ನ ಗ್ಯಾಸ್ ಸಿಲಿಂಡರ್ಗೆ ಬೆಂಕಿ ಹತ್ತಿಕೊಳ್ಳದಂತೆ ಸ್ಥಳೀಯರು ಬೆಂಕಿಗೆ ನೀರು ಹಾಕಿ ನಂದಿಸಿದ್ದಾರೆ. ಅಡುಗೆ ಮಾಡುವಾಗ ಬೆಂಕಿ ತಗುಲಿರಬಹುದು ಎಂದು ಅಂದಾಜಿಸಲಾಗಿದೆ.
ಘಟನೆ ಕುರಿತಂತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಂತಾಪ ವ್ಯಕ್ತಪಡಿದ್ದಲ್ಲದೆ, ಮೃತರ ಕುಟುಂಬಕ್ಕೆ ತಲಾ 4 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.