ರಾಮನಗರ, ಏ 14 (DaijiworldNews/DB): ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಕಾಣದ ಕೈಗಳ ಕೈವಾಡ ಇರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ರಾಮನಗರದ ಚನ್ನಪಟ್ಟಣದಲ್ಲಿ ಮಾತನಾಡಿದ ಅವರು, ಪ್ರಕರಣದಲ್ಲಿ ಆರೋಪ ಕೇಳಿ ಬಂದಿರುವ ಕಾರಣ ಕೆ.ಎಸ್. ಈಶ್ವರಪ್ಪ ರಾಜೀನಾಮೆ ನೀಡುವುದು ಸೂಕ್ತವಾಗಿದೆ. ಮೃತ ಸಂತೋಷ್ ವರ್ಕ್ ಆರ್ಡರ್ ಹಾಗೂ ಎಸ್ಟಿಮೇಟ್ ಪಡೆಯದೇ 4 ಕೋಟಿ ರೂ. ಮೊತ್ತದ ಕಾಮಗಾರಿ ನಡೆಸಿರುವುದರಿಂದ ಈ ಪ್ರಕರಣದಲ್ಲಿ ಹಲವು ಸಂಶಯಗಳು ವ್ಯಕ್ತವಾಗುತ್ತವೆ. ಪ್ರಕರಣದಲ್ಲಿ ಕಾಣದ ಕೈಗಳ ಕೈವಾಡದ ಅನುಮಾನವಿದೆ. ಸೂಕ್ತ ಮತ್ತು ಪಾರದರ್ಶಕ ತನಿಖೆಯಿಂದ ಸತ್ಯ ಹೊರಬಹುದು ಎಂದರು.
ಸಂತೋಷ್ ಸಹಿತ ಮೂವರು ಸ್ನೇಹಿತರು ಲಾಡ್ಜ್ಗೆ ಹೋಗಿ ಸಂತೋಷ್ ಮಾತ್ರ ಒಂದು ಕೊಠಡಿಯಲ್ಲಿ, ಇಬ್ಬರು ಸ್ನೇಹಿತರು ಇನ್ನೊಂದು ಕೊಠಡಿಯಲ್ಲಿ ಉಳಿದುಕೊಳ್ಳಲು ಕಾರಣವೇನು? ಅವರು ಉಡುಪಿಗೆ ಹೋಗಲು ಕಾರಣವೇನು? ಮುಂತಾದ ಸಂಶಯಗಳು ಕಾಡುವುದು ಸಹಜ. ಸೂಕ್ತ ತನಿಖೆಯಿಂದಷ್ಟೇ ಸತ್ಯ ಹೊರಬರಲು ಸಾಧ್ಯ ಎಂದವರು ತಿಳಿಸಿದರು.
ಕರ್ನಾಟಕ ಗುತ್ತಿಗೆದಾರ ಸಂಘ ಮಾಡಿರುವ ಕಮೀಷನ್ ಆರೋಪದಲ್ಲಿ ಸತ್ಯ ಇದೆ ಅನ್ನುವುದಾದರೆ ಸರಕಾರ ಇದನ್ನು ಸರಿಪಡಿಸಿಕೊಳ್ಳಬೇಕು. ಇವತ್ತಿನ ವ್ಯವಸ್ಥೆ ಇಷ್ಟು ಕೀಳು ಮಟ್ಟಕ್ಕೆ ಇಳಿದಿರುವುದು ದುರದೃಷ್ಟಕರ. ಜನಪ್ರತಿನಿಧಿಗಳೆನಿಸಿಕೊಂಡವರೇ ಕಮಿಷನ್ ಕೇಳುತ್ತಾರೆಂಬ ಆರೋಪದ ಬಗ್ಗೆ ಜನರೇ ತೀರ್ಮಾನ ತೆಗೆದುಕೊಳ್ಳಬೇಕು ಎಂದರು.
ಶಿವಮೊಗ್ಗದಲ್ಲಿ ಕೊಲೆಯಾದಾಗ ಬಿಜೆಪಿ ದಂಡು ಆ ಮನೆಗೆ ತೆರಳಿತ್ತು. ಇದೀಗ ಅವರಿಗಿಂತ ನಾವೇನು ಕಡಿಮೆ ಎಂಬಂತೆ ಕಾಂಗ್ರೆಸ್ನವರು ಸಂತೋಷ್ ಮನೆಗೆ ಹೋಗುತ್ತಿದ್ದಾರೆ. ಸಾವಿನಲ್ಲೂ ರಾಜಕಾರಣ ಮಾಡುವುದು ಇವರಿಗೆ ರೂಢಿಯಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.