ಬೆಳಗಾವಿ, ಏ 14 (DaijiworldNews/DB): ನನ್ನ ಸಿ.ಡಿ. ತಯಾರಿಸಿದ ಮಹಾನಾಯಕನ ತಂಡವೇ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದ ಹಿಂದಿದೆ ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ಹೇಳಿದ್ದಾರೆ.
ಬಡಸ ಗ್ರಾಮದಲ್ಲಿರುವ ಸಂತೋಷ್ ಪಾಟೀಲ್ ನಿವಾಸಕ್ಕೆ ಗುರುವಾರ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾನಾಯಕ ಮತ್ತು ಆತನ ತಂಡ ಹಲವು ಕುತಂತ್ರಗಳನ್ನು ಎಸಗುತ್ತಿದ್ದಾರೆ. ಈ ಬಗ್ಗೆ ನನ್ನ ಬಳಿ ಎಲ್ಲಾ ದಾಖಲೆಗಳೂ ಇವೆ. ನನ್ನ ಸಿ.ಡಿ. ತಯಾರಿಸಿದ ಆ ತಂಡ ಇದೀಗ ಸಂತೋಷ್ ಪಾಟೀಲ್ ಆತ್ಮಹತ್ಯೆಯ ಹಿಂದಿದೆ. ಈ ಎರಡೂ ಪ್ರಕರಣಗಳನ್ನು ಸರ್ಕಾರ ಸಿಬಿಐ ತನಿಖೆಗೆ ವಹಿಸಲಿ ಎಂದು ಒತ್ತಾಯಿಸಿದರು.
ಈಶ್ವರಪ್ಪ ರಾಜೀನಾಮೆ ನೀಡಬಾರದು. ಮಹಾನಾಯಕ ಮತ್ತು ಆತನ ತಂಡ ಎಸಗುತ್ತಿರುವ ಕುತಂತ್ರಗಳ ಬಗ್ಗೆ ಪಕ್ಷದ ವರಿಷ್ಠರ ಜೊತೆ ಚರ್ಚಿಸುತ್ತೇನೆ. ಒಂದು ವೇಳೆ ವರಿಷ್ಠರು ಸಮ್ಮತಿ ನೀಡಿದ್ದಲ್ಲಿ ಸೋಮವಾರವೇ ಎಲ್ಲಾ ದಾಖಲೆಗಳನ್ನು ಬಹಿರಂಗಪಡಿಸಲಾಗುವುದು ಎಂದವರು ತಿಳಿಸಿದರು.