ಬೆಂಗಳೂರು, ಏ 14 (DaijiworldNews/DB): ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಕಾಂಗ್ರೆಸ್ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮುಂದಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಗುರುವಾರ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಹಲವು ಘಟನೆಗಳು ನಡೆದಿವೆ. ಕೊಲೆ ಪ್ರಕರಣಗಳನ್ನೇ ಹಿಂಪಡೆದ ನಿದರ್ಶನ ಆ ಪಕ್ಷದ ಅಧಿಕಾರವಧಿ ವೇಳೆ ಆಗಿದೆ. ಅಂತಹ ಪಕ್ಷಕ್ಕೆ ಈಶ್ವರಪ್ಪ ವಿರುದ್ಧ ಹೋರಾಡುವ ಯಾವುದೇ ನೈತಿಕತೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ಅರಾಜಕತೆ ಸೃಷ್ಟಿಸುವ ಕೆಲಸವನ್ನು ಆ ಪಕ್ಷ ನಿರಂತರವಾಗಿ ಮಾಡಿಕೊಂಡು ಬಂದಿದೆ. ರಾಜಕೀಯ ಲಾಭ ಎಲ್ಲಿ ಸಿಗುತ್ತದೆಯೋ ಅಲ್ಲಿ ಕಾಂಗ್ರೆಸ್ ಹೋರಾಟಕ್ಕಿಳಿಯುತ್ತದೆ. ಇದೆಲ್ಲ ಜನರಿಗೆ ಗೊತ್ತಾಗಿರುವುದರಿಂದಲೇ ಆ ಪಕ್ಷವನ್ನು ಜನ ತಿರಸ್ಕರಿಸುತ್ತಿದ್ದಾರೆ ಎಂದ ಅವರು, ಸಂತೋಷ್ ಆತ್ಮಹತ್ಯೆ ಪ್ರಕರಣವನ್ನು ಪಾರದರ್ಶಕವಾಗಿ ತನಿಖೆ ನಡೆಸಲಾಗುವುದು. ಪ್ರಾಥಮಿಕ ವರದಿ ಬಂದ ಬಳಿಕ ಮುಂದಿನ ನಿರ್ಧಾರವನ್ನು ಸರ್ಕಾರ ಕೈಗೊಳ್ಳಲಿದೆ. ಆ ಬಳಿಕವೇ ಈಶ್ವರಪ್ಪ ರಾಜೀನಾಮೆ ನಿರ್ಧಾರವಾಗಲಿದೆ. ಯಾರನ್ನೂ ರಕ್ಷಣೆ ಮಾಡುವ ಉದ್ದೇಶ ಇಲ್ಲಿ ಇಲ್ಲ. ಅಲ್ಲದೆ ಈಶ್ವರಪ್ಪ ವಿಚಾರದಲ್ಲಿ ಹೈಕಮಾಂಡ್ ಮಧ್ಯ ಪ್ರವೇಶಿಸಿಲ್ಲ ಎಂದು ಸ್ಪಷ್ಟಪಡಿಸಿದರು.
ಮುಖ್ಯಮಂತ್ರಿ ಕಚೇರಿಯಲ್ಲೇ ಲಂಚ ಪಡೆಯಲಾಗುತ್ತಿದೆ ಎಂಬ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯನವರ ಆರೋಪಕ್ಕೆ ತಿರುಗೇಟು ನೀಡಿದ ಸಿಎಂ, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಬಿಡಿಎ ಸೇರಿದಂತೆ ಇವಿಧ ಇಲಾಖೆಗಳಲ್ಲಿ ಹಗರಣ ನಡೆದಿದೆ. ಇದಕ್ಕೆ ಸೂಕ್ತ ಸಾಕ್ಷಿಗಳೂ ನಮ್ಮಲ್ಲಿವೆ. ಅಂತಹವರಿಗೆ ನಮ್ಮನ್ನು ಪ್ರಶ್ನಿಸುವ ನೈತಿಕತೆ ಇಲ್ಲ. ಅವರು ಭ್ರಷ್ಟಾಚಾರವನ್ನೇ ಮುಚ್ಚಿ ಹಾಕಿದವರು ಎಂದರು.
ಮುಖ್ಯಮಂತ್ರಿ ಕಚೇರಿ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಕಮಿಷನ್ ಪಡೆಯಲಾಗುತ್ತಿದೆ ಎಂಬ ಸಿದ್ದರಾಂಯ್ಯ ಆರೋಪದ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಈ ಆರೋಪಕ್ಕೆ ಸಂಬಂಧಿಸಿದಂತೆ ದಾಖಲೆ ಇದ್ದರೆ ಅವರು ನೀಡಲಿ. ದಾಖಲೆ ಆಧರಿಸಿ ಸರ್ಕಾರ ಅಂತಹವರ ಮೇಲೆ ಖಂಡಿತಾ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಲೋಕೋಪಯೋಗಿ, ಬೃಹತ್ ನೀರಾವರಿ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಕಮಿಷನ್ ಪಡೆಯಲಾಗಿದೆ ಎಂದು ಗುತ್ತಿಗೆದಾರರು ಆರೋಪಿಸಿದ್ದಾರೆ. ಅದು ನಿಜವೇ ಆದಲ್ಲಿ ಅವರು ಸಂಬಂಧಪಟ್ಟ ದಾಖಲೆ ಒದಗಿಸಲಿ. ದಾಖಲೆ ನೀಡದೆ ಸುಖಾ ಸುಮ್ಮನೆ ಮಾತನಾಡುವುದು ಸಲ್ಲ ಎಂದು ಇದೇ ವೇಳೆ ಸೂಚಿಸಿದರು.