ಬೆಳಗಾವಿ, ಏ 14 (DaijiworldNews/DB): ಸಂತೋಷ್ ಕುಟುಂಬಕ್ಕೆ ಒಂದು ಕೋಟಿ ರೂ. ಪರಿಹಾರ ಘೋಷಿಸುವವರೆಗೂ ಅಂತ್ಯಕ್ರಿಯೆಗೆ ಅವಕಾಶ ನೀಡುವುದಿಲ್ಲ ಎಂದು ಕಾಂಗ್ರೆಸ್ಸಿಗರು ಪಟ್ಟು ಹಿಡಿದ ಪರಿಣಾಮ ಭಾರೀ ಗದ್ದಲದ ನಡುವೆಯೇ ಗುತ್ತಿಗೆದಾರ ಸಂತೋಷ್ ಪಾಟೀಲ್ ಅಂತ್ಯಕ್ರಿಯೆ ಗುರುವಾರ ನೆರವೇರಿತು.
ಸಂತೋಷ್ ಪಾಟೀಲ್ ಅವರ ಸ್ವಂತ ಜಮೀನಿನಲ್ಲಿ ಅಂತ್ಯಕ್ರಿಯೆಗೆ ಸಿದ್ಧತೆ ಮಾಡಲಾಗಿತ್ತು. ಅಂತ್ಯಕ್ರಿಯೆಗೆ ಕುಟುಂಬಸ್ಥರು ತಯಾರಿ ನಡೆಸುತ್ತಿದ್ದಂತೆ ಕಾಂಗ್ರೆಸ್ ಮುಖಂಡರಾದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಎಂಎಲ್ಸಿ ಚೆನ್ನರಾಜ್ ಹಟ್ಟಿಹೊಳಿ, ಕಾಂಗ್ರೆಸ್ ಮುಖಂಡ ಅಡಿವೇಶ ಇಟಗಿ ಮತ್ತಿತರರು ಪ್ರತಿಭಟನೆಗೆ ಮುಂದಾದರು.
ಸಂತೋಷ್ ಕುಟುಂಬಕ್ಕೆ ಒಂದು ಕೋಟಿ ರೂ. ಪರಿಹಾರ ಘೋಷಿಸಬೇಕು, ಮೃತನ ಪತ್ನಿಗೆ ಸರ್ಕಾರಿ ನೌಕರಿ ಕೊಡಿಸಬೇಕು. ಅಲ್ಲಿವರೆಗೆ ಅಂತ್ಯಕ್ರಿಯೆ ಮಾಡಲು ಬಿಡುವುದಿಲ್ಲ ಎಂಬುದಾಗಿ ಕಾಂಗ್ರೆಸ್ಸಿಗರು ಪಟ್ಟು ಹಿಡಿದರು. ಇದರಿಂದ ಸ್ಥಳದಲ್ಲಿ ಭಾರೀ ಗದ್ದಲ ಉಂಟಾಯಿತು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಂತೋಷ್ ಮಾವ, ಸಾವಿನ ಮನೆಯಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ಅಂತ್ಯಕ್ರಿಯೆ ನೆರವೇರಲು ಬಿಡಿ. ಬಳಿಕ ಹೋರಾಟ ಮಾಡೋಣ ಎಂದರು.
ಬಳಿಕ ಜೆಸಿಬಿ ತರಿಸಿ ಮೃತ ಸಂತೋಷ್ ಪಾರ್ಥಿವ ಶರೀರದ ಮೇಲೆ ಮಣ್ಣು ಹಾಕುವಾಗ ಅಡಿವೇಶ ಇಟಗಿ ಅಡ್ಡಿಪಡಿಸಲು ಮುಂದಾದರು. ಈ ವೇಳೆ ಸ್ಥಳೀಯರು ಅವರನ್ನು ಎಳೆದು ಪಕ್ಕಕ್ಕೆ ಕೊಂಡೊಯ್ದರು. ಬಳಿಕ ಪಾರ್ಥಿವ ಶರೀರದ ಮೇಲೆ ಮಣ್ಣು ಹಾಕಿ ಅಂತ್ಯಕ್ರಿಯೆ ನೆರವೇರಿಸಲಾಯಿತು.