ನವದೆಹಲಿ, ಏ 13 (DaijiworldNews/DB): ಬಾಲಿವುಡ್ ನಟಿ ಸೋನಮ್ ಕಪೂರ್ ಮನೆಯಲ್ಲಿ ದರೋಡೆಗೈದು 2.4 ಕೋಟಿ ರೂ. ಮೌಲ್ಯದ ನಗದು ಮತ್ತು ಚಿನ್ನಾಭರಣ ಎಗರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಪೂರ್ ಮನೆಯಲ್ಲಿ ನರ್ಸ್ ಕೆಲಸಕ್ಕಿದ್ದ ಮಹಿಳೆ ಮತ್ತು ಆಕೆಯ ಪತಿಯನ್ನು ಬಂಧಿಸಲಾಗಿದೆ.
ಈ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿದ ನವದೆಹಲಿ ಡಿಸಿಪಿ ಅಮೃತಾ ಗೆಹ್ಲೋಟ್, ನಟಿಯ ಅತ್ತೆಯನ್ನು ನೋಡಿಕೊಳ್ಳುತ್ತಿದ್ದ ಹೋಂ ನರ್ಸ್ ಅಪರ್ಣಾ ರುತ್ ವಿಲ್ಸನ್ ಮತ್ತು ಆಕೆಯ ಪತಿ, ಶಕಾರ್ಪುರದ ಖಾಸಗಿ ಜಮೀನಿನಲ್ಲಿ ಅಕೌಂಟೆಂಟ್ ಆಗಿರುವ ನರೇಶ್ಕುಮಾರ್ ಸಾಗರ್ ಬಂಧಿತರು ಎಂದು ತಿಳಿಸಿದ್ದಾರೆ.
ನಟಿಯ ಮನೆಯಲ್ಲಿ ಫೆಬ್ರವರಿ 11ರಂದು ಕಳ್ಳತನವಾಗಿತ್ತು. ಫೆಬ್ರವರಿ 23ರಂದು ತುಘಲಕ್ ರೋಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ದೆಹಲಿ ಅಪರಾಧ ವಿಭಾಗದ ಪೊಲೀಸರು ವಿಶೇಷ ಸ್ಟಾಫ್ ಬ್ರಾಂಚ್ ಪೊಲೀಸರ ಸಹಕಾರದೊಂದಿಗೆ ತನಿಖೆ ಆರಂಭಿಸಿದ್ದರು. ಈ ವೇಳೆ ಕಪೂರ್ ಮತ್ತು ಆಕೆಯ ಪತಿ ಅಹುಜಾಗೆ ಸೇರಿದ ಮನೆಯಲ್ಲಿ ಕೆಲಸಕ್ಕಿದ್ದವರನ್ನು ಪೊಲೀಸರು ವಿಚಾರಿಸಿದ್ದಾರೆ. ಹೋಂ ನರ್ಸ್ ಆಗಿ ಕೆಲಸಕ್ಕಿದ್ದ ಅಪರ್ಣಾಳನ್ನು ವಿಚಾರಣೆ ನಡೆಸಿದಾಗ ಪೊಲೀಸರಿಗೆ ಅನುಮಾನ ಬಂದಿದ್ದು, ಆಕೆಯಿಂದ ಇನ್ನಷ್ಟು ಮಾಹಿತಿಯನ್ನು ಬಾಯಿ ಬಿಡಿಸಿದ್ದಾರೆ. ಈ ವೇಳೆ ಆಕೆ ಮತ್ತು ಆಕೆಯ ಪತಿ ಸೇರಿ ದರೋಡೆಗೈದಿರುವ ಅಂಶ ಬೆಳಕಿಗೆ ಬಂದಿದೆ. ಹೀಗಾಗಿ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ದರೋಡೆಗೈದ ಚಿನ್ನಾಭರಣ ಮತ್ತು ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.