ಲಖನೌ, ಏ 12 (DaijiworldNews/DB): ವರ್ಗಾವಣೆ ಬೇಕಾದರೆ ಪತ್ನಿಯನ್ನು ರಾತ್ರಿ ನನ್ನೊಂದಿಗೆ ಕಳುಹಿಸು ಎಂಬುದಾಗಿ ಹಿರಿಯ ಅಧಿಕಾರಿಯೊಬ್ಬ ಹೇಳಿದ್ದರಿಂದ ಬೇಸತ್ತ ವಿದ್ಯುತ್ ಇಲಾಖೆಯ ಉದ್ಯೋಗಿಯೊಬ್ಬರು ಡೀಸೆಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಗೋಕುಲ್ ಪ್ರಸಾದ್ (45) ಆತ್ಮಹತ್ಯೆ ಮಾಡಿಕೊಂಡವರು. ಲಖಿಂಪುರದ ಜೂನಿಯರ್ ಇಂಜಿನಿಯರ್ ಕಚೇರಿಯ ಹೊರಗಡೆ ಘಟನೆ ನಡೆದಿದ್ದು, ತತ್ಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಬೆಂಕಿಹಂಚಿಕೊಂಡ ಬಳಿಕ ಗೋಕುಲ್ ಪ್ರಸಾದ್ ವೀಡಿಯೋ ಮಾಡಿ ತನ್ನ ಆತ್ಮಹತ್ಯೆಗೆ ಕಾರಣ ಏನೆಂಬುದನ್ನು ಹೇಳಿಕೊಂಡಿದ್ದಾರೆ. ಜೂನಿಯರ್ ಇಂಜಿನಿಯರ್ ಮತ್ತು ಅವರ ಸಹಾಯಕರಿಂದ ನನಗೆ ಕಿರುಕುಳ ಆಗುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದೆ. ಆದರೆ ಅವರೂ ಸಹಾಯ ಮಾಡಿಲ್ಲ ಎಂದು ನೋವು ತೋಡಿಕೊಂಡಿದ್ದಾರೆ. ಪ್ರತ್ಯೇಕ ಪ್ರಕರಣದಲ್ಲಿ ಆರೋಪಿಗಳು ಕಳೆದ ಮೂರು ವರ್ಷಗಳಿಂದ ತನ್ನ ಪತಿಗೆ ಕಿರುಕುಳ ನೀಡುತ್ತಿದ್ದರು ಎಂದು ಮೃತ ಗೋಕುಲ್ ಪತ್ನಿ ಆರೋಪಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಜೂನಿಯರ್ ಇಂಜಿನಿಯರ್ ನಾಗೇಂದ್ರ ಕುಮಾರ್ ಹಾಗೂ ಗುಮಾಸ್ತರನ್ನು ಅಮಾನತು ಮಾಡಲಾಗಿದೆ.
ಕಳೆದ ಮೂರು ವರ್ಷಗಳಿಂದ ನಿರಂತರ ಕಿರುಕುಳ ನೀಡಲಾಗುತ್ತಿತ್ತು. ಇದರಿಂದ ಪತಿ ಖಿನ್ನತೆಗೊಳಗಾಗಿ ಔಷಧ ತೆಗೆದುಕೊಳ್ಳುತ್ತಿದ್ದರು. ಈ ನಡುವೆ ಅವರನ್ನು ಅಲಿಗಂಜ್ಗೆ ವರ್ಗಾವಣೆ ಮಾಡಿದ್ದರು. ಅಲ್ಲಿಗೆ ಪ್ರಯಾಣ ಕಷ್ಟವಾದ್ದರಿಂದ ಸನಿಹದ ಕಚೇರಿಗೆ ವರ್ಗಾಯಿಸಲು ಕೇಳಿದ್ದರು. ಈ ವೇಳೆ ನಿನ್ನ ಹೆಂಡತಿಯನ್ನು ನಮ್ಮೊಂದಿಗೆ ಮಲಗಲು ವ್ಯವಸ್ಥೆ ಮಾಡಿದರೆ ವರ್ಗಾವಣೆ ನೀಡುತ್ತೇವೆ ಎಂದಿದ್ದರು. ಇದರಿಂದ ನೊಂದು ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪತ್ನಿ ಆರೋಪಿಸಿದ್ದಾರೆ.
ಹಿರಿಯ ಪೊಲೀಸ್ ಅಧಿಕಾರಿ ಸಂಜೀವ್ ಸುಮನ್ ಮಾಧ್ಯಮ ಸಂಸ್ಥೆಯೊಂದಕ್ಕೆ ಪ್ರತಿಕ್ರಿಯಿಸಿ, ಇಲಾಖೆ ಮಟ್ಟದಲ್ಲಿ ಈಗಾಗಲೇ ಜೂನಿಯರ್ ಇಂಜಿನಿಯರ್ನನ್ನು ಅಮಾನತು ಮಾಡಲಾಗಿದೆ. ಅಲ್ಲದೆ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಆತನ ವಿರುದ್ದ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ತನಿಖೆ ನಡೆಸಲಾಗುವುದು ಎಂದಿದ್ದಾರೆ.
ಯಾವುದೇ ಸಮಸ್ಯೆಗೆ ಆತ್ಮಹತ್ಯೆ ಪರಿಹಾರವಲ್ಲ. ನೀವು ಯಾವುದೇ ತೊಂದರೆಯಲ್ಲಿದ್ದರೆ ದಯವಿಟ್ಟು ಮಾನಸಿಕ ಆರೋಗ್ಯ ತಜ್ಞರ ಸಹಾಯ ಪಡೆಯಿರಿ. ಸಹಾಯವಾಣಿ ಸಂಖ್ಯೆ - 9152987821