ಬೆಳಗಾವಿ, ಏ 12 (DaijiworldNews/DB): ಕಾಂಗ್ರೆಸ್ ಪಕ್ಷವು ನಾಯಕತ್ವದ ಕೊರತೆ ಎದುರಿಸುತ್ತಿದೆ. ರಾಜಸ್ತಾನ, ಛತ್ತೀಸ್ಘಡ ಹೊರತುಪಡಿಸಿ ಉಳಿದೆಲ್ಲಾ ರಾಜ್ಯಗಳಲ್ಲಿ ಅಸ್ತಿತ್ವಕ್ಕಾಗಿ ಪರದಾಟ ನಡೆಸುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಉಸ್ತುವಾರಿ ಅರುಣ್ ಸಿಂಗ್ ಲೇವಡಿ ಮಾಡಿದ್ದಾರೆ.
ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗ ಆ ಪಕ್ಷ ಸಂಪೂರ್ಣ ಗೊಂದಲದ ಸ್ಥಿತಿಯಲ್ಲಿದೆ. ನಾಯಕತ್ವ ಇಲ್ಲದ ಪಕ್ಷ ಅದು. ಬಿಜೆಪಿ ಸರ್ಕಾರದ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್ನವರಿಗೆ ಇಲ್ಲ. ರಾಜ್ಯದಲ್ಲಿ ಅವರು ಅಧಿಕಾರದಲ್ಲಿದ್ದಾಗ ರಾಜ್ಯವನ್ನು ಎಟಿಎಂನಂತೆ ಬಳಸಿಕೊಂಡಿದ್ದರು. ಮುಂದೆ ಅಂತಹ ಪರಿಸ್ಥಿತಿಗೆ ರಾಜ್ಯ ಹೋಗಲು ಬಿಡುವುದಿಲ್ಲ ಎಂದರು.
ಬಿಜೆಪಿಯಲ್ಲಿ ಪರಿವಾರ ಪರಿಪಾಲನೆ ಸಂಪ್ರದಾಯ ಇಲ್ಲ. ಆದರೆ ಉಳಿದೆಲ್ಲಾ ಪಕ್ಷಗಳಲ್ಲಿ ತಮ್ಮ ಪರಿವಾರದವರಿಗೇ ಅಧಿಕಾರ ನೀಡುವುದು ಸಂಪ್ರದಾಯದಂತೆ ನಡೆದುಕೊಂಡು ಬಂದಿದೆ. ಕಾಂಗ್ರೆಸ್ ಜನರ ವಿಶ್ವಾಸ ಕಳೆದುಕೊಂಡು ಮೂಲೆಗುಂಪಾಗಿದೆ. ಉತ್ತರ ಪ್ರದೇಶ ಚುನಾವಣೆಯಲ್ಲಿ ಆ ಪಕ್ಷದ ಬಹುತೇಕ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿರುವುದೇ ಇದಕ್ಕೆ ಸಾಕ್ಷಿ ಎಂದವರು ಇದೇ ವೇಳೆ ಟೀಕಿಸಿದರು.
ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿ ನಾಲ್ಕು ರಾಜ್ಯಗಳಲ್ಲಿ ಅಧಿಕಾರಕ್ಕೆ ಬಂದಿದೆ. ಕರ್ನಾಟಕದಲ್ಲಿಯೂ ಮುಂದೆ ಜನ ಬಿಜೆಪಿಯನ್ನು ಮತ್ತೊಮ್ಮೆ ಆರಿಸುವುದು ಸ್ಪಷ್ಟ.150ಕ್ಕೂ ಹೆಚ್ಚಿನ ಸ್ಥಾನಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ. ನಾಲ್ಕೂ ದಿಕ್ಕುಗಳಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳೇ ನಮಗೆ ಶ್ರೀರಕ್ಷೆ ಎಂದವರು ಇದೇ ವೇಳೆ ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ಪ್ರಾಮಾಣಿಕವಾದ ಪಕ್ಷ, ಇದರ ನಾಯಕರೂ ಪ್ರಾಮಾಣಿಕರು. ಪರ್ಸಂಟೇಜ್ ಸರ್ಕಾರ ಎಂಬ ಪ್ರತಿಪಕ್ಷಗಳ ಆರೋಪ ನಿರಾಧಾರವಾಗಿದ್ದು, ಯಾವುದೇ ಭ್ರಷ್ಟಾಚಾರದ ಆರೋಪ ಪಕ್ಷದ ನಾಯಕರ ಮೇಲಿಲ್ಲ. ಶುದ್ಧ ಮತ್ತು ಪಾರದರ್ಶಕ ಆಡಳಿತವನ್ನು ಪ್ರಾಮಾಣಿಕ ನೆಲೆಗಟ್ಟಿನಲ್ಲಿ ಬಿಜೆಪಿ ನೀಡುತ್ತಿದೆ ಎಂದು ಸಮರ್ಥಿಸಿದರು.