ಕೋಲ್ಕತ್ತ, ಏ 12 (DaijiworldNews/DB): ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ಹಂಸಖಾಲಿ ಎಂಬಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿ ಬಾಲಕಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಮತ್ತು ಬಾಲಕಿ ಪರಸ್ಪರ ಪ್ರೀತಿಸುತ್ತಿದ್ದರು ಎಂಬ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಕಳೆದ ವಾರ ಬಾಲಕಿ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿ ಮೃತಪಟ್ಟಿದ್ದಳು. ಈ ಪ್ರಕರಣದ ಪ್ರಮುಖ ಆರೋಪಿ, ಸ್ಥಳೀಯ ಪಂಚಾಯತ್ ಸದಸ್ಯನ ಪುತ್ರ ಬ್ರಜಗೋಪಾಲ್ ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ಈ ಸಂಬಂಧ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಮಮತಾ, ಘಟನೆ ಖಂಡನೀಯ. ಈಗಾಗಲೇ ಆರೋಪಿಯ ಬಂಧನವಾಗಿದೆ. ಆದರೆ ವಿಪಕ್ಷಗಳು ಪ್ರಕರಣಕ್ಕೆ ರಾಜಕೀಯ ತಿರುವು ನೀಡುತ್ತಿವೆ. ಆದರೆ ಆರೋಪಿ ಮತ್ತು ಬಾಲಕಿ ಪರಸ್ಪರ ಪ್ರೀತಿಸುತ್ತಿದ್ದರು ಎಂಬುದಾಗಿ ಪ್ರಾಥಮಿಕ ಮಾಹಿತಿ ಸಿಕ್ಕಿದೆ. ಇದು ಇಬ್ಬರ ಮನೆಯವರಿಗೂ ಗೊತ್ತಿತ್ತು. ತನಿಖೆ ಪೂರ್ಣಗೊಂಡ ಮೇಲೆ ಸತ್ಯ ಏನೆಂದು ತಿಳಿಯಲಿದೆ ಎಂದರು.
ಅತ್ಯಾಚಾರವೇ, ಆಕೆ ಗರ್ಭಿಣಿಯಾಗಿದ್ದಳೇ ಅಥವಾ ಇದೊಂದು ಪ್ರೇಮ ಪ್ರಕರಣವೇ ಎಂಬುದು ಪೊಲೀಸರಿಗೂ ತಿಳಿಯುತ್ತಿಲ್ಲ. ಈಗಾಗಲೇ ಬಾಲಕಿಯ ಅಂತ್ಯಸಂಸ್ಕಾರವನ್ನು ಆಕೆ ಮನೆಯವರು ನೆರವೇರಿಸಿರುವುದರಿಂದ ಪುರಾವೆ ಎಲ್ಲಿಂದ ಪಡೆಯಬೇಕು ಎಂದು ಅವರು ಪ್ರಶ್ನಿಸಿದರು.
ಈ ನಡುವೆ ಘಟನೆಯನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಆಗ್ರಹಿಸಿ ಸೋಮವಾರ ಕೋಲ್ಕತ್ತ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ. ಈ ಅರ್ಜಿಯ ವಿಚಾರಣೆ ಮಂಗಳವಾರ ನಡೆಯುವ ಸಾಧ್ಯತೆ ಇದೆ.