ನವದೆಹಲಿ, ಏ11 (DaijiworldNews/MS): ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಜೊ ಬೈಡನ್, ಸೋಮವಾರ ವರ್ಚುವಲ್ ಮಾದರಿಯಲ್ಲಿ ಪರಸ್ಪರ ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆಂದು ಕೇಂದ್ರ ಸರಕಾರ ಪ್ರಕಟಿಸಿದೆ. ಉಕ್ರೇನ್ ಮೇಲೆ ರಷ್ಯಾದ ಆಕ್ರಮಣದ ನಂತರ ಉಭಯ ನಾಯಕರ ನಡುವಿನ ಮೊದಲ ದ್ವಿಪಕ್ಷೀಯ ಸಂವಾದ ಇದಾಗಿದೆ.
“ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ, ಅಮೆರಿಕ ನಡುವಿನ ರಾಜತಾಂತ್ರಿಕ ಸಂಬಂಧಗಳು, ವ್ಯಾಪಾರ- ವಹಿವಾಟಿನಲ್ಲಿ ಉಭಯ ದೇಶಗಳು ನೀಡುತ್ತಿರುವ ಪರಸ್ಪರ ಸಹಾಯ, ಇಂಡೋ-ಪೆಸಿಫಿಕ್ ಪ್ರಾಂತ್ಯದಲ್ಲಿನ ದೇಶಗಳ ಹಾಗೂ ಜಾಗತಿಕ ಸಮಸ್ಯೆ. ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ಇತ್ತೀಚೆಗೆ ಉಂಟಾಗಿರುವ ವಿದ್ಯಮಾನಗಳೂ ಉಭಯ ನಾಯಕರ ನಡುವೆ ಚರ್ಚೆ ಗೊಳಪಡಲಿವೆ ಮತ್ತು ದ್ವಿಪಕ್ಷೀಯ ಸಮಗ್ರ ಜಾಗತಿಕ ಕಾರ್ಯತಂತ್ರದ ಸಹಭಾಗಿತ್ವವನ್ನು ಬಲಪಡಿಸುವುದು" ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ಮೋದಿ-ಬಿಡೆನ್ ಭೇಟಿಯ ಕುರಿತಂತೆ ಭಾರತದ ಪ್ರಕಟನೆಯಲ್ಲಿ, ಉಕ್ರೇನ್ ಮತ್ತು ರಷ್ಯಾವನ್ನು ಉಲ್ಲೇಖಿಸದಿದ್ದರೂ, ಶ್ವೇತಭವನದ ಪ್ರಕಟನೆಯಲ್ಲಿ ಉಕ್ರೇನ್ನಲ್ಲಿ ರಷ್ಯಾದ ಯುದ್ಧವನ್ನು ಉಲ್ಲೇಖಿಸಲಾಗಿದೆ.
ರಷ್ಯಾದಿಂದ ಕಚ್ಚಾ ತೈಲವನ್ನು ಕೊಳ್ಳಲು ಮುಂದಾಗಿರುವ ಭಾರತದ ಮೇಲೆ ತೈಲವನ್ನು ಕೊಳ್ಳಕೂಡದೆಂದು ಅಮೆರಿಕ, ಪಾಶ್ಚಾತ್ಯ ರಾಷ್ಟ್ರಗಳು ಒತ್ತಡ ಹೇರುತ್ತಿರುವ ಹಿನ್ನೆಲೆಯಲ್ಲಿ ಉಭಯ ನಾಯಕರ ಮಾತುಕತೆ ಭಾರೀ ಮಹತ್ವ ಪಡೆದುಕೊಂಡಿದೆ.