ಜಮ್ಮು-ಕಾಶ್ಮೀರ, ಏ 10 (DaijiworldNews/DB): ಕಾಶ್ಮೀರದಿಂದ ವಲಸೆ ಹೋಗಿದ್ದ ಕಾಶ್ಮೀರಿ ಪಂಡಿತರು ಸಂವಿಧಾನದ 370ನೇ ವಿಧಿ ರದ್ದತಿ ಬಳಿಕ ಮತ್ತೆ ಕಾಶ್ಮೀರದತ್ತ ಮುಖ ಮಾಡುತ್ತಿದ್ದಾರೆ. ಈವರೆಗೆ ಸುಮಾರು 2,100 ಪಂಡಿತರು ಕಾಶ್ಮೀರಕ್ಕೆ ಮರಳಿದ್ದಾರೆ.
ಕಾಶ್ಮೀರದಲ್ಲಿ ಉಗ್ರರ ಬೆದರಿಕೆಗಳು ಇನ್ನೂ ಮುಂದುವರೆಯುತ್ತಿವೆ. ಆದಾಗ್ಯೂ 370ನೇ ವಿಧಿ ರದ್ದತಿ ಬಳಿಕ ಕಾಶ್ಮೀರಕ್ಕೆ ಮರಳುವ ಪಂಡಿತರ ಸಂಖ್ಯೆ ದಿನೇದಿನೇ ಹೆಚ್ಚುತ್ತಿದೆ. ಈ ನಡುವೆ ನಾಲ್ವರು ಕಾಶ್ಮೀರಿ ಪಂಡಿತನ್ನು ಕೊಲೆ ಮಾಡಲಾಗಿತ್ತಲ್ಲದೆ, ಅಲ್ಪಸಂಖ್ಯಾತ ಸಮುದಾಯಗಳ ಸದಸ್ಯರು, ವಲಸೆ ಕಾರ್ಮಿಕರ ಮೇಲೆ ಉಗ್ರರು ಹಲ್ಲೆ ನಡೆಸಿದ ಪ್ರಕರಣಗಳೂ ಇತ್ತೀಚೆಗೆ ವರದಿಯಾಗುತ್ತಿದ್ದವು.
ಸರ್ಕಾರಿ ಉದ್ಯೋಗಗಳಿಗೆ ನೇಮಕಾತಿ ನಡೆಸುವ ಸಂದರ್ಭದಲ್ಲಿ ಕಾಶ್ಮೀರಿ ಪಂಡಿತರಿಗೆ ಅವಕಾಶ ಕಲ್ಪಿಸಲಾಗಿದೆ. 2021-21ರಲ್ಲಿ ವಿವಿಧ ಇಲಾಖೆಗಳಲ್ಲಿ 841 ಹಾಗೂ 2021-22 ರಲ್ಲಿ 1,264 ಕಾಶ್ಮೀರಿ ಪಂಡಿತರನ್ನು ನೇಮಕಾತಿ ಮಾಡಿಕೊಳ್ಳಲಾಗಿದೆ.
2015ರ ಪ್ರಧಾನ ಮಂತ್ರಿ ಅಭಿವೃದ್ಧಿ ಪ್ಯಾಕೇಜ್ ಅಡಿಯಲ್ಲಿ 3000 ಸರ್ಕಾರಿ ಉದ್ಯೋಗಗಳನ್ನು ವಲಸೆ ಕಾಶ್ಮೀರಿ ಪಂಡಿತರಿಗೆ ಮೀಸಲಿಡಲಾಗಿತ್ತು. ಇದರಡಿ 1,913 ಮಂದಿ ಉದ್ಯೋಗ ಪಡೆದುಕೊಂಡಿದ್ದಾರೆ. ಇನ್ನು ಕೆಲವರ ಅರ್ಜಿ ಪರಿಶೀಲನೆ ಹಂತದಲ್ಲಿದೆ.
ಕಾಶ್ಮೀರದಲ್ಲಿ 1990ರಲ್ಲಿ ಮಾನವ ಹತ್ಯೆ ನಡೆದ ಸಂದರ್ಭದಲ್ಲಿ ಸುಮಾರು 55,000 ಪಂಡಿತ ಕುಟುಂಬಗಳು ಮನೆ ತೊರೆದು ಬೇರೆಡೆಗಳಿಗೆ ವಲಸೆ ಹೋಗಿದ್ದರು.