ಬೆಳಗಾವಿ, ಏ 10 (DaijiworldNews/DB): ತಂದೆ ಹೇಳಿದರೆ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ. ಅವರ ನಿರ್ದೇಶನದಂತೆಯೇ ಮುಂದುರಿಯುತ್ತೇನೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಪುತ್ರ ರಾಹುಲ್ ಜಾರಕಿಹೊಳಿ ಹೇಳಿದ್ದಾರೆ.
ಪತ್ರಕರ್ತರ ಪ್ರಶ್ನೆಗೆ ಭಾನುವಾರ ಪ್ರತಿಕ್ರಿಯಿಸಿದ ಅವರು, ಕ್ಷೇತ್ರದ ಜನ ಸ್ಪರ್ಧಿಸುವಂತೆ ಹೇಳುತ್ತಿದ್ದಾರೆ. ಆದರೆ ರಾಜಕೀಯದಲ್ಲಿ ತೊಡಗಿಸಿಕೊಳ್ಳಲು ನಾನಿನ್ನೂ ತಯಾರಾಗಿಲ್ಲ. ಸದ್ಯಕ್ಕೆ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಚುನಾವಣೆಗೆ ನಿಲ್ಲುವಂತೆ ತಂದೆ ಹೇಳಿದರೆ ಆ ಬಗ್ಗೆ ಯೋಚಿಸುತ್ತೇನೆ. ಅವರ ನಿರ್ದೇಶನದಂತೆ ನನ್ನ ಎಲ್ಲಾ ಕೆಲಸಗಳು ಇರುತ್ತವೆ ಎಂದರು.
ಸಾಮಾಜಿಕ ಮತ್ತು ರಾಜಕೀಯ ಜೀವನ ಪ್ರತ್ಯೇಕವಾಗಿರುತ್ತದೆ. ಆದರೆ ಎರಡರಲ್ಲೂ ಜನರಿಗಾಗಿ ಸಮಯ ಮೀಸಲಿಟ್ಟು, ವೈಯಕ್ತಿಕ ಜೀವನವನ್ನು ತ್ಯಾಗ ಮಾಡಬೇಕಾಗುತ್ತದೆ. ಪ್ರೀತಿಸುವವರು, ದ್ವೇಷಿಸುವರು ಎರಡೂ ರಂಗದಲ್ಲಿಯೂ ಇದ್ದಾರೆ. ಎಲ್ಲವನ್ನೂ ಸಮಾನಚಿತ್ತದಿಂದ ಸ್ವೀಕರಿಸಿ ಮುನ್ನಡೆಯಬೇಕಾಗುತ್ತದೆ ಎಂದವರು ತಿಳಿಸಿದರು.