ಹುಬ್ಬಳ್ಳಿ, ಏ 10 DaijiworldNews/HR): ಗೃಹ ಸಚಿವ ಅರಗ ಜ್ಞಾನೇಂದ್ರ ಅವರಿಗೆ ಪೂರ್ತಿ ಜ್ಞಾನ ಇಲ್ಲ. ಬೆಳಿಗ್ಗೆ ಒಂದು ಮಾತನಾಡ್ತಾರೇ, ಮಧ್ಯಾಹ್ನ ಮತ್ತೊಂದು ಮಾತನಾಡುತ್ತಾರೆ. ಅವರು ಅರಗ ಜ್ಞಾನೇಂದ್ರ ಅಲ್ಲ, ಅರ್ಧ ಜ್ಞಾನನೇಂದ್ರ ಎಂದು ಕೆಪಿಸಿಸಿ ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮದ್ ನಲಪಾಡ್ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ರಾಜ್ಯ ಬಿಜೆಪಿ ನೇತೃತ್ವದ ಸರ್ಕಾರ, ತಮ್ಮ ಸರ್ಕಾರದ ಆಡಳಿತ ವೈಫಲ್ಯವನ್ನು ಮುಚ್ಚಿಕೊಳ್ಳೋದಕ್ಕೆ ದಿನಕ್ಕೊಂದು ವಿವಾದವನ್ನು ಹುಟ್ಟು ಹಾಕುತ್ತಿದ್ದು, ಧಾರ್ಮಿಕ ಸಂಘರ್ಷದ ಬಗ್ಗೆ ಕಾನೂನು ಕ್ರಮ ಕೈಗೊಳ್ಳಬೇಕಿದ್ದಂತ ಗೃಹ ಸಚಿವರೇ ಬೆಳಿಗ್ಗೆಯೊಂದು, ಮಧ್ಯಾಹ್ನ ಮತ್ತೊಂದು ಹೇಳಿಕೆ ನೀಡ್ತಾ ಇದ್ದಾರೆ ಎಂದು ಕಿಡಿಕಾರಿದ್ದಾರೆ.
ಇನ್ನು ದಿನೇ ದಿನೇ ತೈಲ ಬೆಲೆ ಗಗನಕ್ಕೆ ಏರುತ್ತಿದ್ದು, ಅಗತ್ಯ ವಸ್ತುಗಳ ಬೆಲೆ ಕೂಡ ಜನರ ಕೈ ಸುಡುತ್ತಿದೆ. ಈ ವೈಫಲ್ಯ ಮುಚ್ಚಿಹಾಕೋದಕ್ಕೆ ಹಿಜಾಬ್, ಹಲಾಲ್ ನಂತರ ಕೋಮು ವಿವಾದ ಸೃಷ್ಠಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.