ಬೆಂಗಳೂರು, ಏ 10 (DaijiworldNews/DB): ರಾಮರಾಜ್ಯ ನಿರ್ಮಾಣವಾಗಬೇಕೆಂಬ ಕಾರಣಕ್ಕೆ ಬೆಂಗಳೂರಿನಲ್ಲಿ ರಾಮ ರಥಯಾತ್ರೆ ಆಯೋಜಿಸಲಾಗಿದೆ. ರಾಮನ ಆದರ್ಶ ಪಾಲಿಸಿ ರಾಜ್ಯ ಸುಭೀಕ್ಷೆಗೆ ಮುಂದಾಗಬೇಕು ಎಂದು ಸಚಿವ ಆರ್. ಅಶೋಕ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಪ್ರಥಮ ಬಾರಿಗೆ ಆರ್. ಅಶೋಕ್ ನೇತೃತ್ವದಲ್ಲಿ ಭಾನುವಾರ ಸಂಪನ್ನಗೊಂಡ ರಾಮ ರಥ ಯಾತ್ರೆಯ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಮರ್ಯಾದ ಪುರುಷೋತ್ತಮ ಎಂದು ರಾಮನನ್ನು ಹೇಳುತ್ತಾರೆ. ರಾಮನ ಆದರ್ಶ ನಮಗೆಲ್ಲರಿಗೂ ಅನುಕರಣೀಯ. ರಾಮರಾಜ್ಯ ಪರಿಕಲ್ಪನೆಯ ಉದ್ದೇಶ ಹೊತ್ತು ಈ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದರು.
ಬಿಟಿಎಮ್ ಬಡಾವಣೆ, ಬಸವನಗುಡಿ, ಬೆಂಗಳೂರು ದಕ್ಷಿಣ, ಬೊಮ್ಮನಹಳ್ಳಿ ಸೇರಿದಂತೆ ವಿವಿಧೆಡೆಯಿಂದ ಸುಮಾರು ಎಂಟು ಸಾವಿರ ಮಂದಿ ಯಾತ್ರೆಯಲ್ಲಿ ಪಾಲ್ಗೊಂಡರು. 6 ಕಿಲೋ ಮೀಟರ್ ದೂರ ಪಾದಯಾತ್ರೆ ನಡೆಯಿತು. ಬಳಿಕ ಶಾಸಕರ ಕಚೇರಿಯಲ್ಲಿ ಆರ್. ಅಶೋಕ್ ಪೂಜೆ ನೆರವೇರಿಸಿದರು.
ಸಂಸದ ತೇಜಸ್ವಿ ಸೂರ್ಯ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಶ್ರೀ ಈಶ್ವರಾನಂದ ಸ್ವಾಮೀಜಿ, ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ , ಆರೆಸ್ಸೆಸ್ನ ದಕ್ಷಿಣ ಕ್ಷೇತ್ರ ವಾಹಕ ತಿಪ್ಪೇಸ್ವಾಮಿ, ಎ . ನಾರಾಯಣ, ಶಾಸಕ ಎಂ. ಕೃಷ್ಣಪ್ಪ, ರವಿ ಸುಬ್ರಹ್ಮಣ್ಯ ಉಪಸ್ಥಿತರಿದ್ದರು.