ಬೆಂಗಳೂರು, ಏ 10 (DaijiworldNews/DB): ನನ್ನ ಕೆಲಸಕ್ಕೆ ಸಿದ್ದರಾಮಯ್ಯನವರು ಸರ್ಟಿಫಿಕೇಟ್ ಕೊಡುವುದು ಅಗತ್ಯವಿಲ್ಲ. ಅವರ ಅಧಿಕಾರಾವಧಿಯಲ್ಲಿ ಎಷ್ಟು ಮಂದಿ ಹಿಂದೂ ಕಾರ್ಯಕರ್ತರು ಕೊಲೆಯಾಗಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಗೃಹ ಸಚಿವ ಅಸಮರ್ಥರು ಎಂದ ಸಿದ್ದರಾಮಯ್ಯ ಹೇಳಿಕೆಗೆ ಭಾನುವಾರ ಪ್ರತಿಕ್ರಿಯಿಸಿದ ಅವರು, ಗೃಹ ಸಚಿವನಾಗಿ ಸಮರ್ಥವಾಗಿ ಕರ್ತವ್ಯ ನಿರ್ವಹಿಸಿದ್ದೇನೆ. ಯಾವುದೋ ಕೆಲವು ಘಟನೆಗಳನ್ನು ಮುನ್ನಲೆಗೆ ತಂದು ನನ್ನನ್ನು ಅಸಮರ್ಥ ಎನ್ನುವ ಸಿದ್ದರಾಮಯ್ಯ ಅವರು ಮೊದಲು ಅವರ ಅಧಿಕಾರಾವಧಿಯಲ್ಲಿ ನಡೆದ ಘಟನೆಗಳನ್ನು ಮೆಲುಕು ಹಾಕಿಕೊಳ್ಳಲಿ. ಈ ಬಗ್ಗೆ ಸದನದಲ್ಲಿ ಅವರೆದುರೇ ಹೇಳಿದ್ದೇನೆ ಎಂದು ತಿರುಗೇಟು ನೀಡಿದರು.
ಕಾಂಗ್ರೆಸ್ನವರಿಗೆ ಅಧಿಕಾರ ಸಿಕ್ಕಿಲ್ಲ ಎಂಬ ಕಾರಣಕ್ಕೆ ರಾಜ್ಯ ಜಂಗಲ್ ರಾಜ್ ಆಗಿದೆ ಎಂದು ಆರೋಪಿಸುತ್ತಾರೆ. ಆದರೆ ಅವರು ಹೇಳುವಂತೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ ಎಂದರು.
ಚಂದ್ರು ಹತ್ಯೆ ಪ್ರಕರಣದ ಆರೋಪಿಗಳನ್ನು ಯಾವುದೇ ತಡ ಮಾಡದೆ ಬಂಧಿಸಲಾಗಿದೆ. ಕಾಂಗ್ರೆಸ್ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಗೃಹ ಇಲಾಖೆ ಡಮ್ಮಿ ಆಗಿತ್ತು. ನಿವೃತ್ತ ಪೊಲೀಸ್ ಅಧಿಕಾರಿಯೋರ್ವರ ಕೈಗೆ ಅವರು ಈ ಇಲಾಖೆಯನ್ನು ಒಪ್ಪಿಸಿದ್ದರು. ಆದರೆ ಪ್ರಸ್ತುತ ಇಲಾಖೆ ಸದೃಢವಾಗಿ ಕೆಲಸ ನಿರ್ವಹಿಸುತ್ತಿದೆ ಎಂದವರು ತಿಳಿಸಿದರು.