ನವದೆಹಲಿ, ಏ 10 (DaijiworldNews/DB): ನಾನ್ ಡೊಮಿಸಿಲ್ (ನಿವಾಸಯೇತರ) ಸ್ಟೇಟಸ್ ಮೂಲಕ ಇನ್ಫೋಸಿಸ್ ಕಂಪನಿಯ ಸಂಸ್ಥಾಪಕ ನಾರಾಯಣಮೂರ್ತಿ ಅವರ ಪುತ್ರಿ ಅಕ್ಷತಾ ಮೂರ್ತಿ ತೆರಿಗೆ ವಿನಾಯಿತಿ ಪಡೆದು ವಂಚಿಸಿದ್ದಾರೆ ಎಂದು ಬ್ರಿಟನ್ ಪ್ರತಿಪಕ್ಷಗಳು ಆರೋಪಿಸಿವೆ.
ಅಕ್ಷತಾ ಪತಿ ರಿಷಿ ಸುನಕ್ ಬ್ರಿಟನ್ ನ ಮುಂದಿನ ಪ್ರಧಾನಿಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಆದರೆ, ಪ್ರಸ್ತುತ ಹಣಕಾಸು ಸಚಿವರಾಗಿರುವ ರಿಷಿ ಸುನಕ್ ಅವರ ಪತ್ನಿ ಅಕ್ಷತಾ ತೆರಿಗೆ ವಿನಾಯಿತಿ ಪಡೆದು ವಂಚನೆ ಎಸಗಿದ್ದಾರೆ ಎಂದು ಆಪಾದನೆ ಹೊತ್ತಿದ್ದಾರೆ. ಆದರೆ, ಪ್ರತಿಪಕ್ಷಗಳ ಆರೋಪಗಳ ಕುರಿತು ಪ್ರತಿಕ್ರಿಯಿಸಿರುವ ಸಚಿವ ಹಾಗೂ ಅಕ್ಷತಾ ಪತಿ ರಿಷಿ ಸುನಕ್, ಅಕ್ಷತಾ ಬ್ರಿಟನ್ ನಾಗರಿಕಳಲ್ಲ ಮತ್ತು ಅವರು ಭಾರತದ ಪೌರತ್ವ ಹೊಂದಿದ್ದಾರೆ. ಬ್ರಿಟನ್ ನಲ್ಲಿ ಅವರು ಗಳಿಸಿದ ಹಣಕ್ಕೆ ಸರಿಯಾಗಿಯೇ ತೆರಿಗೆ ಪಾವತಿ ಮಾಡುತ್ತಿದ್ದಾರೆ. ಅವರಿಂದ ಯಾವುದೇ ವಂಚನೆ ಆಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸಿದರೂ ಮಾಸ್ಕೋದಲ್ಲಿರುವ ಇನ್ಫೋಸಿಸ್ ಕಚೇರಿಯನ್ನು ಮುಚ್ಚದ ಕಾರಣ ಅಕ್ಷತಾ ಅವರನ್ನು ಪ್ರತಿಪಕ್ಷಗಳು ಈ ಹಿಂದೆ ಟೀಕಿಸಿದ್ದವು. ಲಾಭಾಂಶದಲ್ಲಿ ರಕ್ತದ ಹಣವನ್ನು ಸಂಗ್ರಹಿಸಿದ್ದಾರೆ ಎಂದು ಪ್ರತಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿದ್ದವು. ಬಳಿಕ ಮಾಸ್ಕೋದ ಇನ್ಫೋಸಿಸ್ ಕಚೇರಿಯನ್ನು ಮುಚ್ಚಲಾಗಿತ್ತು.