ನವದೆಹಲಿ, ಏ 10 (DaijiworldNews/DB): ವಿಶ್ವಾದ್ಯಂತ ಮೋಜು ಮಾಡುವ ಪಕ್ಷ ನಮ್ಮದಲ್ಲ. ರಾಹುಲ್ ಗಾಂಧಿಯವರು ಬಿಎಸ್ಪಿ ವಿರುದ್ಧ ಮಾತನಾಡುವ ಮೊದಲು ಚಿಂತಿಸಬೇಕಾಗಿದೆ ಎಂದು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ತಿರುಗೇಟು ನೀಡಿದ್ದಾರೆ.
ಚುನಾವಣೆ ವೇಳೆಯಲ್ಲಿ ಉತ್ತರ ಪ್ರದೇಶದಲ್ಲಿ ಪಕ್ಷದ ಮೈತ್ರಿ ಪ್ರಸ್ತಾಪಕ್ಕೆ ಬಿಎಸ್ಪಿ ಮುಖ್ಯಸ್ಥರು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದರು. ಈ ಹೇಳಿಕೆ ಬಳಿಕ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯೆ ನೀಡಿದ ಮಾಯಾವತಿ, ರಾಹುಲ್ ಗಾಂಧಿಯವರ ಇಂತಹ ಹೇಳಿಕೆಗಳಿಂದ ನಮಗೆ ಯಾವುದೇ ತೊಂದರೆಯಾಗುವುದಿಲ್ಲ. ಆದರೆ ಅವರ ಪಕ್ಷಕ್ಕೆ ಅವರೇ ಹಾನಿ ಮಾಡಿಕೊಳ್ಳುತ್ತಿದ್ದಾರೆ ಎಂದರು.
ಕಾಂಗ್ರೆಸ್ ಪಕ್ಷ ಮೊದಲು ತನ್ನ ಬಗ್ಗೆ ಯೋಚಿಸಿಕೊಳ್ಳುವುದನ್ನು ಕಲಿಯಬೇಕು. ವಿಶ್ವಾದ್ಯಂತ ಮೋಜು ಮಾಡುವ ಪಕ್ಷ ನಮ್ಮದಲ್ಲ. ಬಿಜೆಪಿ, ಆರೆಸ್ಸೆಸ್ ಕಾಂಗ್ರೆಸ್ ಮುಕ್ತ ಮಾತ್ರ ಮಾಡುವುದಲ್ಲ, ಬದಲಾಗಿ ವಿರೋಧ ಮುಕ್ತವನ್ನಾಗಿ ಮಾಡಲು ಯೋಜಿಸುತ್ತಿವೆ. ಏಕೈಕ ಪ್ರಬಲ ಪಕ್ಷವಾಗಿ ಆ ಪಕ್ಷ ಉಳಿಯಲು ಹವಣಿಸುತ್ತಿದೆ ಎಂದವರು ಇದೇ ವೇಳೆ ತಿಳಿಸಿದರು.