ಬೆಂಗಳೂರು, ಏ 10 DaijiworldNews/HR): ನಾಡಿನ ಸಮಸ್ತ ಜನತೆಯಲ್ಲಿ ನನ್ನ ವಿನಮ್ರ ಮನವಿ ಇಷ್ಟೆ. ರಾಮನವಮಿ ಹಬ್ಬವನ್ನು ಭಕ್ತಿ-ಶ್ರದ್ಧೆಯಿಂದ ಆಚರಿಸೋಣ. ಆದರೆ ನಮ್ಮ ರಾಮಸ್ಮರಣೆ ಇನ್ನೊಬ್ಬರಿಗೆ ನೋವುಂಟು ಮಾಡದಂತೆ ಎಚ್ಚರ ವಹಿಸೋಣ. ರಾಮನ ಹೆಸರಿನಲ್ಲಿ ಶೋಭಾಯಾತ್ರೆ ನಡೆಸಲು ನನ್ನದೇನೂ ಅಭ್ಯಂತರ ಇಲ್ಲ, ಅದಕ್ಕೆ ನನ್ನದೂ ಬೆಂಬಲ ಇದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾದಿರುವ ಅವರು, ಶೋಭಾಯಾತ್ರೆ ಹೆಸರಿನಲ್ಲಿ ಇನ್ನೊಂದು ಸಮುದಾಯ ವಾಸ ಮಾಡುವ ಬೀದಿಗಳಲ್ಲಿ ಅಥವಾ ಅವರ ಪ್ರಾರ್ಥನಾ ಮಂದಿರಗಳ ಮುಂದೆ ಡಿಜೆ ಸೆಟ್ಟುಗಳನ್ನು ಹಾಕಿಕೊಂಡು 15-20 ನಿಮಿಷ ಕಾಲ ಕುಣಿಯುವುದು, ಕೇಕೆ ಹಾಕುವುದು ಇತ್ಯಾದಿ ಬೇಡ. ಇದರಿಂದ ಶಾಂತಿ ಕದಡುತ್ತದೆ. ಹೀಗೆ ಆಗುವುದು ಬೇಡ ಎಂದರು.
ಇನ್ನು ಒಂದು ಸಮುದಾಯದ ಜನರು ಈಗ ಉಪವಾಸ ಆಚರಣೆಯಲ್ಲಿದ್ದಾರೆ. ಈ ಸಮಯದಲ್ಲಿ ಅವರ ಬಡಾವಣೆಗಳಿಗೆ ಹೋಗಿ ಶಾಂತಿಗೆ ಭಂಗ ತರುವುದು ಬೇಡ. ಅದಕ್ಕೆ ಅವಕಾಶವನ್ನೂ ಕೊಡಬಾರದು ಎಂದು ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿಗಳಲ್ಲಿ ನನ್ನ ಮನವಿ ಎಂದಿದ್ದಾರೆ.
ಶೋಭಾಯಾತ್ರೆಯನ್ನು ಹಿಂದುಗಳು ವಾಸ ಮಾಡುವ ಬಡಾವಣೆ, ಬೀದಿಗಳಲ್ಲಿ ಮಾಡಿ, ಅಲ್ಲೆಲ್ಲ ಅರ್ಧ ಗಂಟೆ ಸಾಲದಿದ್ದರೆ, ಒಂದು ಗಂಟೆ ಮಾಡಿ. ಇದಕ್ಕೆ ನನ್ನ ಬೆಂಬಲವಿದೆ. ಎಲ್ಲರೂ ರಾಮಸ್ಮರಣೆ ಮಾಡೋಣ, ಪ್ರತಿಯೊಬ್ಬರ ಹೃದಯದಲ್ಲಿ ಆ ರಾಮನು ಚಿರಸ್ಥಾಯಿಯಾಗಿ ನಿಲ್ಲಬೇಕು ಎನ್ನುವುದೇ ನನ್ನ ಆಶಯ ಎಂದು ಹೇಳಿದ್ದಾರೆ.